ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು!!.. ಜಯಶ್ರೀ.ಜೆ.ಅಬ್ಬಿಗೇರಿ
ವಿಜಯ ದರ್ಪಣ ನ್ಯೂಸ್
ಕಾವ್ಯ ಸಂಗಾತಿ
ಮಾತಿನಲ್ಲಿ ಹೇಳಲಾರೆನು
ರೇಖೆಯಲ್ಲಿ ಗೀಚಲಾರೆನು !!
ಜಯಶ್ರೀ.ಜೆ. ಅಬ್ಬಿಗೇರಿ
ಹೇ ಕಾವ್ಯ,,,,,,,,,,,,,
ನೀನೆಂದರೆ ನನಗೆ ಕೇವಲ ಚೆಂದದ ಚೆಲುವಿಯಲ್ಲ, ಸುಂದರ ಯುವತಿಯಲ್ಲ.
ಉಕ್ಕುತ್ತಿರುವ ಹದಿಹರೆಯಕ್ಕೆ ಹರೆಯವನ್ನು ಮತ್ತಷ್ಟು ತುಂಬುವವಳು ಮಾತ್ರವಲ್ಲ, ನನ್ನ ಕರುಳಿಗೆ ಹೊಂದಿಕೊಂಡು ಬೆಳೆದ ಜೀವಂತ ಜೀವಸೆಲೆ. ಇದು ಕರುಳಿನ ಹೃದಯದ ಮಾತು. ಕರುನಾಡ ನೆಲದ ಮಗನಾಗಿ ನಾ ಹೇಳುವುದು ಸತ್ಯ ಅಂತ ನಿನಗೂ ಗೊತ್ತು. ಮನದ ಕುದುರೆ ಲಂಗುಲಗಾಮಿಲ್ಲದೆ ಗೊತ್ತುಗುರಿಯಿಲ್ಲದೇ ಎತ್ತೆತ್ತಲೋ ಓಡುತ್ತಿದೆ. ನಿನ್ನ ಪ್ರೀತಿ, ಹೃನ್ಮನಗಳ ಬಯಲಾಟವಾಡುತ್ತಿದೆ. ಈ ಅನುಭವ ನನಗೆ ಹೊಸತು. ನಿನ್ನೊಂದಿಗೆ ಕಳೆದ ನೆನಪುಗಳು ನನ್ನ ಸ್ಮೃತಿ ಪಟಲದಲ್ಲಿ ಇನ್ನೂ ಭದ್ರವಾಗಿವೆ ಗೆಳತಿ. ಆ ಮೊದಲ ಭೇಟಿ ಮರೆಯುವುದಾದರೂ ಹೇಗೆ ಸುಮತಿ?
ದುಂಡನೆಯ ಮುಖ, ಹೊಳೆವ ಕಂಗಳು, ತಿದ್ದಿ ತೀಡಿದಂತಹ ಮೈಮಾಟ, ಹಾಲಿನಂತಹ ಮೈಬಣ್ಣ, ನಕ್ಕಾಗ ಬೀಳುವ ಗುಳಿ ಅಬ್ಬಬ್ಬಾ! ಪದಗಳು ಸಾಲುವುದಿಲ್ಲ ನಿನ್ನಂದ ವರ್ಣಿಸಲು. ಆ ದೇವರು ಪುರುಸೊತ್ತಿದ್ದಾಗ ನಿನ್ನ ಮಾಡಿರಬೇಕು. ಕಡುಗೆಂಪು ಸೀರೆ ಉಟ್ಟು ಅದಕ್ಕೊಪ್ಪುವ ಬಂಗಾರ ಬಣ್ಣದ ರವಿಕೆ ತೊಟ್ಟು ಬಸ್ಸಿನಲ್ಲಿ ನನ್ನ ಬಳಿ ಬಂದು ಕುಳಿತಾಗ ಮುಗಿಲು ಮೂರೇ ಗೇಣು ಉಳಿದಿತ್ತು. ಕಣ್ಣಿಗಿಟ್ಟ ಕಾಡಿಗೆ ಬಾ ರಸಿಕ ಎಂದು ಕರೆದಂತೆ ಅನಿಸಿ,ಮೈನವಿರೇಳಿತು.ಆ ಅದ್ವಿತೀಯ ಸೌಂದರ್ಯ ನಿನ್ನಂದ ಚೆಂದ ಹೊಗಳಲು ಕವಿತೆಯ ಪದಗಳಲ್ಲಿ ಪೋಣಿಸಿಡಲು ನಾನು ಕವಿ ಅಲ್ಲ. ಕವಿ ಅಲ್ಲದಿದ್ದರೂ ರಸಿಕ ಮನದಲ್ಲಿ ಹಾಡಿ ಹೊಗಳಲು ಬರುವುದಿಲ್ಲ ಅಂತೇನೂ ಇಲ್ಲ.
ನಾನು ಇದೆಲ್ಲ ಆಲೋಚಿಸುತ್ತಿದ್ದೆ. ಅಷ್ಟರ ನಡುವೆ ಮೂರು ಜನ ಕೂಡುವ ಸೀಟಿನಲ್ಲಿ ಮತ್ತೊಬ್ಬರು ಬಂದು ಕೂತಾಗ ಒಬ್ಬರಿಗೊಬ್ಬರು ಅಂಟಿಕೊಂಡು ಕುಳಿತುಕೊಳ್ಳುವುದು ಅನಿವಾರ್ಯವಾಯಿತು ಸುಳಿವ ಸುಳಿಗಾಳಿಗೆ ಗುಂಗುರು ಕೂದಲು ಕೆನ್ನೆಯನ್ನು ಪದೇ ಪದೇ ಮುತ್ತಿಕ್ಕಿತ್ತಿತ್ತು. ಪಕ್ಕಕ್ಕಿದ್ದ ನಿನ್ನಂತಹ ಸೌಂದರ್ಯ ರಾಶಿ ಮತ್ತಷ್ಟು ಪಕ್ಕಕ್ಕೆ ಸರಿದು ಹತ್ತಿರ ಕುಳಿತಾಗ ಉಸಿರಾಟದ ವೇಗ ಹೆಚ್ಚುತ್ತಲೇ ಇತ್ತು. ಡ್ರೈವರ್ ಹಾಕಿದ ಬ್ರೇಕಿಗೆ ಭುಜಕ್ಕೆ ಭುಜ ಢಿಕ್ಕಿ ಹೊಡೆಯಿತು. ಇಬ್ಬರೂ ಒಬ್ಬರಿಗೊಬ್ಬರು ಪರಸ್ಪರ ನೋಡಿಕೊಂಡೆವು. ಕಣ್ಣಲ್ಲಿ ಏನೆಂದು ಹೇಳಿಕೊಳ್ಳಲಾಗದ ಅಸಹಾಯಕತೆ. ಜೀವನ ಪೂರ್ತಿ ನಿನ್ನ ಕೈ ಹಿಡಿಯಬೇಕೆಂದರೆ ಅದೃಷ್ಟ ಬೇಕು ಎಂದೆನಿಸಿತು.
ನಿನ್ನ ಪುಟ್ಟ ಹೃದಯದಲ್ಲಿ ಒಂಚೂರು ಜಾಗ ನನಗಾಗಿ ಇದೆಯೇನೋ ಎಂದು ಕೇಳಲು ಮನಸ್ಸು ತವಕಿಸುತ್ತಿತ್ತು. ಹೀಗೆ ಹೃದಯ ಕೇಳಿ ಬಿಟ್ಟರೆ ಹಾಗೆ ಸುಮ್ಮನೇ ಕೊಟ್ಟು ಬಿಡುವಷ್ಟು ಹುಂಬ ಹುಡುಗಿ ನೀನಲ್ಲ. ಆದರೂ ಬಂಗಾರದಂತಹ ಬೆಡಗಿನ ಬೆಡಗಿಯನ್ನು ಮುಂದಿಟ್ಟುಕೊಂಡು ಸುಮ್ಮನೇ ಬಿಟ್ಟು ಕೊಡುವುದು ಸರಿಯಲ್ಲ ಎಂದು ಒಳಮನಸ್ಸು ಜೋರಾಗಿ ಕೂಗಿ ಹೇಳುತ್ತಿತ್ತು.
ಮೊಬೈಲನ್ನು ಬೆರಳಿನಿಂದ ತಿಕ್ಕುತ್ತಿದ್ದ ನನ್ನ ಕಣ್ಣು ದಂತದ ಗೊಂಬೆಯಂತಹ ನಿನ್ನನ್ನೇ ತಿನ್ನುವಂತೆ ದಿಟ್ಟಿಸುತ್ತಿತ್ತು.
ನಿನ್ನ ಗೆಳತಿ ‘ಕಾವ್ಯ’ ಎಂದು ನಿನ್ನ ಹೆಸರು ಹಿಡಿದು ಕೂಗಿದಾಗ ರೋಮಾಂಚನವೆನಿಸಿತು. ನಿಜಕ್ಕೂ ರಸಭರಿತ ಕಾವ್ಯವೇ ಸರಿ. ಅದ್ಯಾವ ಕವಿಯ ಕಣ್ಣಿಗೆ ನೀ ಬಿದ್ದರೂ ಅವನಿಗೆ ಹಬ್ಬದೂಟ ಸಿಕ್ಕಷ್ಟು ಖುಷಿ. ಏಕೆಂದರೆ ನೀನು ಕಾವ್ಯಕೆ ಗಣಿಯಿದ್ದಂತೆ. ರಸಪಾಕ ಕಾವ್ಯವನ್ನು ಓದಿದ ಯಾರಾದರೂ ನಿನ್ನ ಹುಚ್ಚು ಅಭಿಮಾನಿಯಾಗುವರು. ನನಗಾಗಿರುವುದು ಹಾಗೆಯೇ. ಅದೆಲ್ಲಿ ಮಾಯವಾಗುವಳೋ ಮಾಯಾಂಗನೆ ಈ ಮಹಾನಗರದೊಳಗೆ. ಈಗ ಬಿಟ್ಟರೆ ಮರಳಿ ಇವಳು ಸಿಕ್ಕಲ್ಲ ಎನ್ನುತ್ತಿತ್ತು ಹೃದಯ.
ಎಲ್ಲೆಲ್ಲಿ ಅಲೆದು ಅಲೆದು ಬಂದರೂ ಸುರುಳಿ ಸುತ್ತಿರುಗಿ ನಿನ್ನಲ್ಲಿಗೆ ಬಂದು ನಿಲ್ಲುತ್ತದೆ ಯೋಚನಾ ಲಹರಿ. ನಿನ್ನ ಸುತ್ತಲೇ ಸುತ್ತುತ ಗಿರಕಿ ಹೊಡೆಯುತ ಹತ್ತಿರ ಹತ್ತಿರ ತಲುಪುತ ಇನ್ನೇನು ನೀ ಕೈಗೆ ಸಿಕ್ಕೆ ಎನ್ನುವಷ್ಟರಲ್ಲೇ ಅಮ್ಮ ಬಂದು ‘ಕೆಲಸಕ್ಕೆ ಹೋಗಲು ತಡವಾಗುತ್ತೆ ಬೇಗ ಏಳು.’ ಎಂದು ಬೈದು ಎಬ್ಬಿಸುತ್ತಾಳೆ. ಎದೆಯ ತುಂಬ ನಿನ್ನದೇ ಹಾಡು ತುಂಬಿಕೊಂಡು ನೀ ಅಂದು ಸಿಕ್ಕ ನೂರಾ ಹನ್ನೊಂದರ ಬಸ್ಸಿಗೆ ಲಗುಬಗೆಯಿಂದಲೇ ಹತ್ತುವೆ. ಒಂದೇ ಸುದ್ದಿಯನ್ನು ನೂರಾರು ಚಾನೆಲ್ಲುಗಳು ಬೇರೆ ಬೇರೆ ಬಗೆಯಲ್ಲಿ ಹೇಳಿದ ಹಾಗೆ ನಿನ್ನ ಬಗೆಗೆ ಗೆಳೆಯರಿಗೆಲ್ಲ ಫೋನಾಯಿಸಿ ಹೇಳುವೆ.
ಬದುಕಿನಲ್ಲಿ ಮುಂದೇನು ಅಂತ ನನಗೂ ಗೊತ್ತಿಲ್ಲ. ಅನುಭವದಿಂದಲೇ ಬರುವುದು ಎಲ್ಲ. ಆದರೆ ಪ್ರೀತಿ ಅನ್ನೋ ವಿಷಯದಲ್ಲಿ ಹಾಗಿಲ್ಲ ನೋಡು. ಇದಕ್ಕೆ ಯಾವ ಗುರುವೂ ಬೇಕಾಗಿಲ್ಲ. ಗುರು ಇಲ್ಲದ ವಿದ್ಯೆ ಅಂದರೆ ಇದೊಂದೇ. ಮಳೆಗಾಲದ ಸಂಜೆ ಹಿತವಾಗಿ ಆವರಿಸಿದೆ. ಸುರಿಯುವ ಮಳೆ ಹೂವಂತೆ ನೇವರಿಸಿದೆ. ಅದರಗಳೆರಡು ಹೂಮುತ್ತು ಸುರಿಸಲು ತವಕಿಸುತ್ತಿವೆ. ನೀನೀಗ ಸಿಗದಿದ್ದರೆ ಈ ದೇವರೂ ಕ್ಷಮಿಸುವುದಿಲ್ಲ. ಎದೆಯ ಹಿಂಡುವ ದುಃಖ ನನಗೆ ಮಾತ್ರ. ನಿನಗೆ ಅದರ ಅರಿವೇ ಇಲ್ಲ. ನಿನ್ನ ನವಿರಾದ ಬೆರಳುಗಳ ಸಂದಿಯಲ್ಲಿ ಸಿಕ್ಕಿ ಹಾಕಿಕೊಂಡು ನಲಿದಾಡುವ ನನ್ನ ಒರಟಾದ ಬೆರಳುಗಳು ಈಗಂತೂ ಕೆಲಸಕಾರ್ಯವಿಲ್ಲದೆ ನಿಂತಲ್ಲೇ ಯಾಕೋ ಚಡಪಡಿಸುತ್ತಿವೆ.
ಮನಸ್ಸು ಯಾವುದಾದರೂ ಒಂದು ಹೊಸ ಆಯಾಮವನ್ನು ತೆಗೆದು ಹೊಸ ಪರಿಭಾಷೆಯೊಂದಿಗೆ ನಿನ್ನನ್ನು ಅರ್ಥೈಸುವ ಹೊಸ ಒಳನೋಟಗಳನ್ನು ಕೊಡಲು ಯತ್ನಿಸುತ್ತಲೇ ಇರುತ್ತದೆ. ಒಂದು ರೀತಿಯಲ್ಲಿ ನಿನ್ನೀ ಒಲವು ನನಗೊಂದು ಹೊಸದೊಂದು ಯೋಗಾಯೋಗದ ಪ್ರಯೋಗ ಅನ್ನು.
ಒಟ್ಟಿನಲ್ಲಿ ಹೇಳಬೇಕೆಂದರೆ ನೀನಿಲ್ಲದೇ ನನ್ನೀ ಬದುಕಿಗೆ ಅರ್ಥವಿಲ್ಲ ಅನ್ನೋದರಲ್ಲಿ ಅನುಮಾನವಿಲ್ಲ. ಬದುಕಿನ ಕಷ್ಟಗಳನು ನಿರಾಂತಕವಾಗಿ ನಿರ್ಭಯವಾಗಿ ಎದೆಗೊಟ್ಟು ಎದುರಿಸಲು ಕಲಿಸಿದವಳು ತಗ್ಗು, ಎತ್ತರ, ಬನ, ಬಯಲು, ನೆರಳು, ಬೆಳಕುಗಳನ್ನೆಲ್ಲ ಒಂದೇ ಸಮವಾಗಿ ತಿಳಿಯಬೇಕೆಂದು ತಿಳಿ ಹೇಳಿದವಳು.. ಅದೆಂಥ ಅಚ್ಚುಕಟ್ಟು ನಿನ್ನಲ್ಲಿ! ಅಚ್ಚುಕಟ್ಟು ಎನ್ನುವುದು ಸುಮ್ಮನೆ ಬಾಯಿಮಾತಾಗದೆ ಮಾಡಿದ ಕೆಲಸದಲ್ಲಿ ಒಡಮೂಡಿತ್ತಿತ್ತು. ಆಲೋಚನೆಗಿಂತ ಈ ಜೀವನ ದೊಡ್ಡದೆಂದು ನನ್ನೀ ಜೀವ ನಂಬಿದೆ. ಜೀವಕೆ ಜೀವವಾಗಿ ಜೀವ ನೀಡಲು ನೀನು ಬಂದೇ ಬರುವೆ ಎಂದು ಈ ಜೀವ ಕಾದಿದೆ. ನನ್ನ ಜೀವನದ ಗುರು,ಗುರಿ, ಸಿದ್ಧಿ, ಸಾಧನೆ ಎಲ್ಲವೂ ನೀನೇ
ನಿನ್ನ ಗೆಳತಿ ಸಹಾಯದಿಂದ ಗೆಳೆತನ ಬೆಳೆಸಿದೆ. ಆ ಗೆಳೆತನ ಪ್ರೀತಿಯಾಗಿ ತಿರುಗಿತು. ನಾವಿಬ್ಬರೂ ಪಾರ್ಕ್ ಗಾರ್ಡನ್ ತಿರುಗಿದ್ದು ಮನೆಯಲ್ಲಿ ಗೊತ್ತಾಗಿದೆ. ಅವ್ವ ಅಪ್ಪ ನನ್ನ ಬಿಡದ ಹಠಕ್ಕೆ ನಿನ್ನನ್ನು ಮನೆ ತುಂಬಿಸಿಕೊಳ್ಳಲು. ನಿನ್ನ ಹೆತ್ತವರು ನನ್ನನ್ನು ಅಳಿಯನಾಗಿಸಿಕೊಳ್ಳಲು ಒಪ್ಪಿದ್ದಾರೆ.
ಆ ಒಂದು ಸಂಜೆ ಪಿಕ್ನಿಕ್ಕಿನಿಂದ ಮರಳಿ ಬರುವಾಗ ನೀ ಹೇಳಿದ ಆ ಮೂರು ಪದಗಳು (ಐ ಲವ್ ಯೂ) ನನ್ನ ಕಿವಿಯಲ್ಲಿ ಇನ್ನೂ ಅನುರಣಿಸುತ್ತಿವೆ.
ಒಲಿದು ಬಂದ ನಿನಗೆ ಒಂದು, ಎರಡು, ಮೂರು ಎಂದು ಎಣಿಸಿ ಮುತ್ತಿಕ್ಕಿ ಮುದ್ದಿಸುವ ಬಯಕೆ ನನ್ನಲ್ಲಿಲ್ಲ. ಮೈಗೆಲ್ಲ ಮುತ್ತಿನ ಹಾರವನೇ ತೊಡಿಸುವ ಹೆಬ್ಬಯಕೆ ನನ್ನ ಕಾಡುತ್ತಿದೆ. ಈಗೀಗ ಏನೇ ಮಾತನಾಡಿದರೂ ಅದರಲ್ಲಿ ನಿನ್ನ ಹೆಸರು ನನಗರಿವಿಲ್ಲದಂತೆ ನುಸುಳುತ್ತದೆ. .ನಿನ್ನ ಬಗ್ಗೆ ಬರೆಯುತ ಹೋದರೆ ಕಾದಂಬರಿಯೇ ಆದೀತು. ‘ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು. ಆದರೂನೂ ಹಾಡದೇನೆ ಉಳಿಯಲಾರೆನು’ ಎನ್ನುವ ಹಾಡು ಗುನುಗುನಿಸುತ. ನೀ ಬರುವ ದಾರಿಯನ್ನೇ ಕಾಯುತಿರುವೆನು ಜಾತಕ ಪಕ್ಷಿಯಂತೆ.
ಕಬ್ಬಿನ ಗದ್ದೆಯಲ್ಲಿ ಕಣ್ಮರೆಯಾದ ನವಿಲಿನಂತೆ ಕಣ್ಮರೆಯಾಗಿ ಅದೆಲ್ಲಿ ಹೋದೆ? ಹಸಿರು ಹೊದ್ದು ನಗುವ ಇಳೆಗೆ ತಾನೂ ಮುಗುಳ್ನಗುತ್ತ ಬಾನು ಮುತ್ತಿನ ಮಳೆ ಹರಿಸುತ್ತಿದೆ. ಹೊಳೆ ಹಳ್ಳ ಉಕ್ಕಿ ಕಡಲಿಗೆ ದುಂಬಾಲು ಬಿದ್ದ ಸದ್ದು ನೆನದು ನಿನ್ನ ನೆನೆಯುತ ಒಂಟಿಯಾಗಿ ಮಲಗಿರುವೆ ರಗ್ಗು ಹೊದ್ದು. ಜಂಟಿಯಾಗುವ ನಿನಗೆ ತುದಿಗಾಲಲ್ಲಿ ಕಾದಿರುವೆ. ಮುಗಿಲು ಹರಿದು ಸುರಿಯುತ್ತಿದೆ ಮಳೆ ಮುಗಿದಿಲ್ಲ ಇನ್ನೂ. ಬಂದುಬಿಡು ಬೇಗ ಮಳೆಗಾಲ ಮುಗಿಯುವದರೊಳಗೆ. ಮಂಚದ ಪಕ್ಕದಲ್ಲಿ ಸಿಂಗರಿಸಿಟ್ಟ ಹೂದಾನಿಯ ಹರೆಯದ ಹೂವು ಬಾಡುವದರೊಳಗೆ. ಕಾಯುತಿರುವೆ ಕರಿಮಣಿಯ ಮಾಂಗಲ್ಯ ಹಿಡಿದು.
ಇಂತಿ ನಿನ್ನ
ಕಾವ್ಯ ಪ್ರಿಯ
- ಜಯಶ್ರೀ.ಜೆ. ಅಬ್ಬಿಗೇರಿ