ಕೃಷಿ ಕ್ಷೇತ್ರದಲ್ಲಿ ಸಬಲೀಕರಣದ ನಿದರ್ಶನ ಶ್ರೀಮತಿ ಜ್ಯೋತಿ ಪ್ರಕಾಶ್.
ವಿಜಯ ದರ್ಪಣ ನ್ಯೂಸ್.. ಚಿಕ್ಕಬಳ್ಳಾಪುರ ಜೂನ್ 17
ಕೃಷಿ ಚಟುವಟಿಕೆಯಿಂದ ಆರ್ಥಿಕತೆಯ ಮೇಲೆ ಅವಲಂಬಿತವಾಗಿರುವ ಈ ದೇಶವು ಎಲ್ಲಾ ವರ್ಗದ ಜನರ ಹಸಿವು ನೀಗಿಸುವಲ್ಲಿ ಹಸಿರುಕ್ರಾಂತಿಯನ್ನೇ ಪ್ರಧಾನ ವಾಗಿರಿಸಿಕೊಂಡಿದೆ.
ಕೃಷಿ ಚಟುವಟಿಕೆಗಳಲ್ಲಿ ಮುಖ್ಯವಾಗಿ ನಮಗೆ ಕಾಣ ಸಿಗುವುದು ಪುರುಷರ ಪಾತ್ರವೇ ಹೆಚ್ಚು. ಆದರೆ ಒಂದು ಮೂಲದ ಪ್ರಕಾರ ವ್ಯವಸಾಯ ಕ್ಷೇತ್ರದಲ್ಲಿ ಪುರುಷರಷ್ಟು ಸಮಾನವಾಗಿ ಮಹಿಳೆಯರು ತಮ್ಮ ಶ್ರಮದಾನ ಮಾಡುವುದು ಸಹಸತ್ಯ. ಬಡತನ ನಿರ್ಮೂಲನೆಯಲ್ಲಿ ಗ್ರಾಮೀಣ ಭಾರತದ ಕೃಷಿ ಆಧಾರಿತ ಆರ್ಥಿಕ ಚಟುವಟಿಕೆಗಳ ಬಹುಪಾಲು ಹೊಂದಿದ್ದು ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಯುವ ಜನತೆ ವ್ಯವಸಾಯಕ್ಕೂ ಹೆಚ್ಚು ಆದ್ಯತೆ ಕೊಡುತ್ತಿರುವುದು ಮಹತ್ತರ ಬೆಳವಣಿಗೆ.
ಕೊರೋನಾ ವಿಶ್ವವನ್ನೇ ಆವರಿಸಿ ತಲ್ಲಣಗೊಳಿಸಿದಾಗ ಜಗತ್ತಿನ ಬಹುತೇಕ ರಾಷ್ಟçಗಳು ದಿಗ್ಬಂಧನ ವಿಧಿಸಿದಾಗ ಬಹುಜನರುಗ್ರಾಮೀಣ ಬದುಕಿನೆಡೆಗೆ ಪಯಣಿಸಿದ್ದು ಸಹ ವ್ಯವಸಾಯ ಕ್ಷೇತ್ರಕ್ಕೆ ಒಂದು ಗೌರವ ತಂದು ಕೊಟ್ಟಂತಾಯ್ತು. ಇದೇ ಪರಿಧಿಯಲ್ಲಿ ವಿದ್ಯಾವಂತ ಹೆಣ್ಣುಮಕ್ಕಳು ಆಧುನಿಕ ಬೇಸಾಯದತ್ತ ವಿಶೇಷ ಉತ್ಸುಕತೆಯಿಂದ ಕಣ್ಣು ಹಾಯಿಸಿದ್ದು ಬೆರಗು ಹುಟ್ಟಿಸುವ ವಿಚಾರವು ಹೌದು!
ಇಂಥಾವುದೇ ಅಚ್ಚರಿಯೆಂಬಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಡವಿ ಗೊಲ್ಲವಾರಹಳ್ಳಿಯೆಂಬ ಕುಗ್ರಾಮದಲ್ಲಿ ಕಾನೂನಿನ ಪದವೀಧರೆಯೊಬ್ಬರು ಸೊಂಪಾದ ಬೆಳೆ ಬೆಳೆದು ಆರ್ಥಿಕವಾಗಿ ಸದೃಢವಾಗಿದ್ದು ಕೊಂಡು ಮುನ್ನಡೆಯುತ್ತಿರುವುದು ಸ್ತ್ರೀ ಸಮುದಾಯಕ್ಕೆ ಹೆಮ್ಮೆಯ ಸೆಲೆಯಾಗಿದೆ. ಈ ಹಿರಿಮೆಯ ಗರಿ ತೊಟ್ಟವರು ಶ್ರೀಮತಿ ಜ್ಯೋತಿ ಪ್ರಕಾಶ್.
ಚಿಕ್ಕಬಳ್ಳಾಪುರ ನಗರದ ಪೊಲೀಸ್ ಅಧೀಕ್ಷಕರ ಕಛೇರಿಯಿಂದ ಸ್ವಲ್ಪ ಮುಂದೆ ಸಾಗಿದರೆ ಸಿಗುವ ಪುಟ್ಟ ಗ್ರಾಮ ಅಡವಿ ಗೊಲ್ಲವಾರಹಳ್ಳಿ ಎಂಬ ಪುಟ್ಟ ಗ್ರಾಮ. ಇದೇ ಗ್ರಾಮದ ರಾಮಕೃಷ್ಣಪ್ಪ ಶ್ರೀಮತಿ ಶಾರದಮ್ಮ ದಂಪತಿಗಳ ಮಗಳಾದ ಜ್ಯೋತಿಯವರು ಪಿಯುಸಿ ನಂತರ ಎಲ್.ಎಲ್.ಬಿ. ವ್ಯಾಸಂಗ ಮುಗಿಸಿ ಕಾನೂನು ಪದವೀಧರರಾಗಿದ್ದಾರೆ. ಅದೇ ಗ್ರಾಮದ ಕೆಂಪಣ್ಣ ಮತ್ತು ಭಾಗ್ಯಮ್ಮ ದಂಪತಿಗಳು ತಮ್ಮ ಮಗ ಪ್ರಕಾಶರವರಿಗೆ ಜ್ಯೋತಿಯವರನ್ನು ಮದುವೆ ಮಾಡಿಕೊಂಡು ಮನೆ ತುಂಬಿಸಿಕೊಂಡರು.
ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಸಣ್ಣಮಟ್ಟಿಗೆ ತಮ್ಮದೇ ಛಾಪು ವಹಿಸಿಕೊಂಡಿರುವ ಕೆಂಪಣ್ಣನವರಿಗೆ ಸೊಸೆ ಜ್ಯೋತಿ ಕೋರ್ಟು ಕಲಾಪಗಳಲ್ಲಿ ಗುರುತಿಸಿಕೊಂಡು ಮನೆಯಿಂದ ಹೊರಗಿರುವುದು ಅಷ್ಟಾಗಿ ಇಷ್ಟವಿರಲಿಲ್ಲ. ಅದಕ್ಕೆ ಮಾನ್ಯತೆ ನೀಡಿದ ಜ್ಯೋತಿಯವರು ಕುಟುಂಬ ಕಲಾಪಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ದ್ರಾಕ್ಷಿ ವ್ಯಾಪಾರಸ್ಥರಾದ ಪತಿ ಪ್ರಕಾಶರವರೊಂದಿಗೆ ಅನ್ಯೂನ್ಯ ದಾಂಪತ್ಯದ ದ್ಯೋತಕವಾಗಿ ಧೀರಜ್ಗೌಡ ಮತ್ತು ವೈನಿಕಗೌಡ ಎಂಬ ಮುದ್ದಾದ ಮಕ್ಕಳ ತಾಯಿಯಾಗಿ ಸಂಸಾರದ ಲಾಲನೆ ಪಾಲನೆಯಲ್ಲಿ ಮಗ್ನರಾಗಿ ಬಿಟ್ಟಿದ್ದರು.
ಆದರೆ ಜೀವನದ ಏಕತಾನತೆ ಅವರನ್ನು ಆಗಾಗ ಕಾಡಿಸುತ್ತಿತ್ತು! ಅವರ ಮನಸ್ಸು ಮತ್ತಷ್ಟು ಕಾರ್ಯಶೀಲರಾಗಿರಲು ತುಡಿಯುತ್ತಿತ್ತು. ಈ ತುಡಿತವೇ ಹುಟ್ಟಿದ ಮನೆ ಮತ್ತು ಮೆಟ್ಟಿದ ಮನೆಯ ಮೂಲ ಕಸುಬಾದ ಕೃಷಿ ಕೇಂದ್ರಿತ ಚಟುವಟಿಕೆಯತ್ತ ಗಮನ ಹರಿಸುವಂತೆ ಮಾಡಿತ್ತು. ಕೊರೋನಾ ಸಂಕಷ್ಟದಲ್ಲಿ ಎಲ್ಲರೂ ‘ಹೌಸ್ ಅರೆಸ್ಟ್’ ಆಗಿದ್ದ ಸಂದರ್ಭದಲ್ಲಿ ಜ್ಯೋತಿಯವರ ತುಡಿತಕ್ಕೆ ಮಾವನವರ ತೋಟ ಕನಸಿನ ವೇದಿಕೆಯಾಯಿತು.
ಒಂದು ಹವ್ಯಾಸವಾಗಿ ಪ್ರಾರಂಭಗೊಂಡ ಜ್ಯೋತಿಯವರ ತೋಟಗಾರಿಕೆ ಉತ್ಸಾಹ ಕೇವಲ ಮುಕ್ಕಾಲು ಎಕರೆಯಲ್ಲಿ ಅರಳಿ ನಿಂತ ಸೇವಂತಿ (ಸೆಂಟ್ಎಲ್ಲೋ) ಆಕರ್ಷಕ ಬೆಳೆಯಾಗಿ ಸುಮಾರು 17 ಲಕ್ಷ ರೂ.ಗಳಷ್ಟು ಲಾಭ ತೊಂದೊಡ್ಡಿದ್ದಾಗ ಇಡೀ ಊರಿಗೆ ಊರೇ ನಿಬ್ಬೆರಗಾಗಿ ನೋಡಿತ್ತು. ಇದು ಸಹ ಆರಂಭ ಶೂರತ್ವವಲ್ಲ ಎಂದು ಸಾಧಿಸಿ ತೋರುವ ನಿಟ್ಟಿನಲ್ಲಿ ಮತ್ತಷ್ಟು ಹೂಗಳ ಬೆಳೆ ಬೆಳೆದ ಜ್ಯೋತಿಯವರ ನಡೆ ಗ್ರಾಮದ ಜನತೆಯು ಈ ನಿಟ್ಟಿನಲ್ಲಿ ಪ್ರಯತ್ನಿಸುವಲ್ಲಿ ಪ್ರೇರೇಪಿಸಿತ್ತು ಅಂದರೆ ಅತಿಶಯೋಕ್ತಿಯಲ್ಲ ಎನ್ನುತ್ತವೆ ಈ ಹಳ್ಳಿಯ ಇತರೆ ರೈತರು ಹರಿಸುತ್ತಿರುವ ಹೂವುಗಳ ಘಮಲು ನೋಡಿದರೆ!
ಅಲ್ಲಿಂದ ಹಿಂದಿರುಗಿ ನೋಡದ ಶ್ರೀಮತಿ ಜ್ಯೋತಿಯವರು ಕಾಯಿಪಲ್ಯೆಗಳನ್ನು ಬೆಳೆಯುವಲ್ಲಿ ಸಹ ಸಾಧನೆಗೈದಿದ್ದು ಇವರು ಬೆಳೆದ ಸೋರೆಕಾಯಿ ಫಸಲು ಲಾಭ ತಂದೊಡ್ಡಿ ತರಕಾರಿ ಬೆಳೆ ತೆಗೆಯುವಲ್ಲಿ ಸಹ ಸಿದ್ದಹಸ್ತರೆಂದು ನಿರೂಪಿಸಿದೆ. ಪ್ರಸ್ತುತ ತಮ್ಮ ತೋಟದ ದ್ರಾಕ್ಷಿ ಚಪ್ಪರದಲ್ಲಿ ತೂಗುಯ್ಯಾಲೆಯಾಡುತ್ತಿರುವ ಹೀರೇಕಾಯಿ ಫಸಲು ದಿನವೊಂದಕ್ಕೆ 500 ರಿಂದ 600 ಕೆಜಿ ಮಾರುಕಟ್ಟೆ ಸೇರಿ ಇವರ ದುಡಿಮೆ ತಕ್ಕ ಪ್ರತಿಫಲ ಕೊಡುತ್ತಿದೆ.
ಜ್ಯೋತಿಯವರು ತೋಟಗಾರಿಕೆ ಮಾತ್ರವಲ್ಲದೆ ತಮ್ಮ ಅತ್ತೆಯವರೊಂದಿಗೆ ಸೇರಿ ಹೈನುಗಾರಿಕೆ, ಕುಕುಟೋದ್ಯಮ, ಕುರಿ, ರೇಷ್ಮೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡು ತಮ್ಮನ್ನು ತಾವು ನಿರೂಪಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ, ಭಾರತದಲ್ಲಿ ಕೃಷಿಯಲ್ಲಿ ವಿದ್ಯಾವಂತ ಮಹಿಳೆಯರು ಹೆಚ್ಚಿದ ಕೃಷಿ ಉತ್ಪಾದಕತೆಗೆ ಕೊಡುಗೆ ನೀಡುವ ಮೂಲಕ ಧನಾತ್ಮಕ ಬದಲಾವಣೆಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ, ಗ್ರಾಮೀಣ ಅಭಿವೃದ್ಧಿಯನ್ನು ಉತ್ತೇಜಿಸುವುದು. ಭಾರತದಲ್ಲಿ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಹಿಳೆಯರ ಸಬಲೀಕರಣಕ್ಕೆ ನಿದರ್ಶನವಾಗಿದೆ.
ಎಸ್. ರಾಜೇಂದ್ರಬಾಬು, ಚಿಕ್ಕಬಳ್ಳಾಪುರ