ಕಲುಷಿತ ನೀರು ಕುಡಿದು ಮೇಕೆಗಳು ಸಾವು.
ವಿಜಯ ದರ್ಪಣ ನ್ಯೂಸ್… ದೇವನಹಳ್ಳಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಯಲಿಯೂರು ಗ್ರಾಮದ ಹೊರವಲಯದಲ್ಲಿ ಕಲುಷಿತ ನೀರು ಕುಡಿದು ಮೇಕೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಕ್ಕಳಂತೆ ಮೇಕೆಗಳನ್ನು ಪೋಷಿಸಿದ್ದ ದೊಡ್ಡ ತತ್ತಮಂಗಲ ಗ್ರಾಮದ ರೈತ ಮುನಿಶಾಮಪ್ಪ ಅವರ ಮುಂದೆಯೇ ಮೇಕೆಗಳು ಅಸ್ವಸ್ಥಗೊಂಡು ಸಾವನ್ನಪ್ಪಿದ್ದನ್ನು ಕಂಡು ಭಾವುಕರಾದರು.
ಮುನಿಶಾಮಪ್ಪ ಅವರು ಅಂಗವಿಕಲನಾದರೂ ಯಾರ ಬಳಿಯೂ ಅಂಗಲಾಚದೆ 30 ವರ್ಷಗಳಿಂದ ಮೇಕೆ ಸಾಕಾಣಿಕೆ ಮೂಲಕ ಸ್ವಾಭಿಮಾನಿ ಜೀವನ ಕಟ್ಟಿಕೊಂಡಿದ್ದರು. ಅದರಲ್ಲಿ ಬಂದ ಹಣದಲ್ಲಿಯೇ ತಮ್ಮ ಐದು ಜನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಬದುಕು ರೂಪಿಸಿಕೊಟ್ಟಿದ್ದರು . ಇಂತಹ ಸಂದರ್ಭದಲ್ಲಿ ಬುಧವಾರ ನಡೆದ ಘಟನೆ ಅಘಾತಕಾರಿಯಾಗಿದೆ.
ಎಂದಿನಂತೆ ಮೇಕೆಗಳನ್ನು ಅರಣ್ಯ ಪ್ರದೇಶಕ್ಕೆ ಮೇಹಿಸಲು ಹೊಡೆದುಕೊಂಡು ಹೋಗಿ ಬರುವಾಗ ಅಲ್ಲೇ ಇದ್ದ ತೊಟ್ಟಿಯಲ್ಲಿ ಮೇಕೆಗಳು ನೀರು ಕುಡಿದಿವೆ. ನೀರು ಕುಡಿದು ಸ್ವಲ್ಪ ಹೊತ್ತಲ್ಲೇ ಮೇಕೆಗಳು ಅಸ್ವಸ್ಥಗೊಂಡು ಕುಸಿದು ಬಿದ್ದಿವೆ.
ಇದ್ದಕ್ಕಿದ್ದಂತೆ ಮೇಕೆಗಳು ಕುಸಿದು ಬೀಳುತ್ತಿದ್ದಂತೆ ಅಕ್ಕಪಕ್ಕದವರು ಬಂದು ಮೇಕೆಗಳನ್ನು ರಕ್ಷಿಸಲು ಮುಂದಾಗಿದ್ದಾರೆ . ಆದರೆ ಅಷ್ಟರಲ್ಲಿ ನಾಲ್ಕು ಲಕ್ಷ ಬೆಲೆ ಬಾಳುವ 18 ಮೇಕೆಗಳು ಸಾವನ್ನಪ್ಪಿದ್ದವು. ಮೇಕೆಗಳು ಕುಡಿದ ನೀರಿನ ತೊಟ್ಟಿಯನ್ನು ಆಸಿಡ್ನಿಂದ ತೊಳೆದಿದ್ದು ಹೊಸ ನೀರು ಬಿಟ್ಟಾಗ ಕೆಮಿಕಲ್ ಮಿಶ್ರಣದ ನೀರಿನಿಂದ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ದೇವನಹಳ್ಳಿ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರೀಕ್ಷೆಗಾಗಿ ಒಂದು ಸಾವನ್ನಪ್ಪಿರುವ ಮೇಕೆಯನ್ನು ಪ್ರಯೋಗಾಲಯಕ್ಕೆ ಕಳಿಸಿಕೊಟ್ಟಿದ್ದಾರೆ. ಪೊಲೀಸರು ಮತ್ತು ಪಶು ವೈದ್ಯಕೀಯ ಇಲಾಖೆಯ ವರದಿ ಬಂದ ನಂತರ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ರೈತನಿಗೆ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ತಹಶೀಲ್ದಾರ್ ಶಿವರಾಜ್ ನೀಡಿದ್ದಾರೆ.