ಇಂದು ಕನ್ನಡದ ಸಾಹಿತಿ ತ.ಸು.ಶಾಮರಾಯರ ಜನ್ಮ ದಿನ.
ವಿಜಯ ದರ್ಪಣ ನ್ಯೂಸ್…
ಇಂದು ಕನ್ನಡದ ಖ್ಯಾತ ಸಾಹಿತಿ ತ.ಸು.ಶಾಮರಾಯರ ಜನುಮ ದಿನ.
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕಿನ ತಳುಕು ಗ್ರಾಮವನ್ನು ಹೊಸಗನ್ನಡ ಸಾಹಿತ್ಯದಲ್ಲಿ ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದ ಇಬ್ಬರು ಸಹೋದರರಲ್ಲಿ ಮೊದಲಿಗರು ಟಿ. ಎಸ್. ವೆಂಕಣ್ಣಯ್ಯನವರು. ಮತ್ತೊಬ್ಬರು ಅವರ ಎಲ್ಲಾ ಸಕಲ ಸದ್ಗುಣಗಳ ಪ್ರತಿರೂಪದಂತಿದ್ದ ತ.ಸು. ಶಾಮರಾಯರು. ಸಾಹಿತ್ಯಚರಿತ್ರೆಗಾರರಾಗಿ, ಪ್ರಾಚೀನ ಕಾವ್ಯ ಹಾಗೂ ಶಾಸ್ತ್ರ ಗ್ರಂಥಗಳ ಸಂಪಾದಕರಾಗಿ ಹಲವಾರು ಉತ್ತಮ ಗ್ರಂಥಗಳ ಕರ್ತೃ ಹಾಗೂ ಪ್ರಕಾಶಕರಾಗಿ, ಗುರುಪರಂಪರೆಯ ಆದರ್ಶಶಿಕ್ಷಕರಾಗಿ ವಿಶಿಷ್ಟ ಚಾಪು ಮೂಡಿಸಿದ ತಳುಕಿನ ಸುಬ್ಬಣ್ಣ ಶಾಮರಾಯರು ಹುಟ್ಟಿದ್ದು 1906ರ ಜೂನ್ 12ರಂದು.
ಶಾಮರಾಯರು ಚಳ್ಳಕೆರೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಲೆಬೆನ್ನೂರಿನಲ್ಲಿ ಮುಲ್ಕಿ ತೇರ್ಗಡೆ, ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದಾವಣಗೆರೆ ಸಮೀಪದ ಆಲೂರು ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭ ಮಾಡಿ ಉನ್ನತ ವ್ಯಾಸಂಗದ ಅಭಿಲಾಷೆಯಿಂದ ಮೈಸೂರಿನ ಯುವರಾಜಾ ಕಾಲೇಜಿಗೆ ಬಂದರು. ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಚಿತ್ರದುರ್ಗದಲ್ಲಿ ಮಾಧ್ಯಮಿಕ ಶಾಲೆಯ ಶಿಕ್ಷಕರಾಗಿ ಸೇರಿಕೊಂಡರು. ಅದೂ ರುಚಿಸದೆ ಪುನಃ ಮೈಸೂರಿಗೆ ಬಂದು ಕನ್ನಡದ ಆಚಾರ್ಯಪುರುಷರೆನಿಸಿಕೊಂಡಿದ್ದ ಬಿ.ಎಂ. ಶ್ರೀ, ಕುವೆಂಪು, ಡಿ.ಎಲ್.ಎನ್, ತೀ.ನಂ.ಶ್ರೀ ಮೊದಲಾದ ಗುರುಶ್ರೆಷ್ಠರ ಮಾರ್ಗದರ್ಶನದಲ್ಲಿ 1940ರಲ್ಲಿ ಬಿ.ಎ. ಆನರ್ಸ್ ಪದವಿಯನ್ನು ಸುವರ್ಣ ಪದಕದೊಂದಿಗೆ ಪಡೆದುಕೊಂಡರು.
ಶಿಕ್ಷಕವೃತ್ತಿ ಅವರನ್ನು ಕೈಬೀಸಿ ಕರೆಯಿತು. ಐದುನೂರಕ್ಕೂ ಹೆಚ್ಚುಪುಟಗಳಲ್ಲಿ ಕನ್ನಡ ನಾಟಕಗಳ ವಿಸ್ತೃತವಾದ ಅಧ್ಯಯನವನ್ನು ಕುವೆಂಪು ಅವರ ಮಾರ್ಗದರ್ಶನದಲ್ಲಿ ನಡೆಸಿ ಸಿದ್ಧಪಡಿಸಿದ ‘ಕನ್ನಡ ನಾಟಕಗಳು’ ಸಂಶೋಧನಾ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ. ಪದವಿ ಗಳಿಸಿದರು. ಎಂ.ಎ ಪಡೆದ ಮೇಲೆ ತಮ್ಮ ಬಹುಕಾಲದ ಆಸೆಯಂತೆ ಮೈಸೂರು ವಿಶ್ವವಿದ್ಯಾನಿಲಯ ಪ್ರವೇಶಿಸಿ ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಸಾರಂಗದ ನಿರ್ದೇಶಕರಾಗಿ, ಗ್ರಂಥಪಾಲಕರಾಗಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದರು. ಪ್ರಸಾರಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಒಂದು ವರ್ಷದ ಅವಧಿಯಲ್ಲಿ ಇಪ್ಪತ್ತಾರು ಪಠ್ಯಪುಸ್ತಕಗಳನ್ನು ಪ್ರಕಟಿಸಿದ ಕೀರ್ತಿ ಶಾಮರಾಯರದು. ಇವರ ಕಾಲದಲ್ಲಿ ನೂರಾರು ಉಪಯುಕ್ತ ಪುಸ್ತಕಗಳು ಪ್ರಕಟವಾಗಿ, ಕರ್ನಾಟಕದ ಮೂಲೆ ಮೂಲೆಗಳಲ್ಲಿ ಸಹಸ್ರಾರು ಪ್ರಚಾರೋಪನ್ಯಾಸಗಳು ಜರುಗಿ ಪ್ರಸಾರಂಗದ ಕೀರ್ತಿ ದೇಶಾದ್ಯಂತ ಹರಡಿತು.
ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕ ವರ್ಗದಲ್ಲಿದ್ದ ಕುವೆಂಪು, ಡಿ.ಎಲ್. ನರಸಿಂಹಾಚಾರ್, ಎಸ್. ವಿ. ಪರಮೇಶ್ವರ ಭಟ್ಟ, ಮೊದಲಾದ ಸಿದ್ಧ ಪ್ರಸಿದ್ಧರೊಡನೆ ಅವರಿಗೆ ಹೆಗಲೆಣೆಯಾಗಿ ಕೆಲಸ ಮಾಡಿ ‘ವಿದ್ಯಾರ್ಥಿವತ್ಸಲ’ರೆಂದು ಕೀರ್ತಿವಂತರಾದವರು ತ.ಸು.ಶಾಮರಾಯರು. ಸ್ವತಃ ಬಡತನದ ಬವಣೆಯಲ್ಲಿ ಬೆಂದಿದ್ದ ಶಾಮರಾಯರಿಗೆ ಬಡವರ ವಿಚಾರದಲ್ಲಿ ತುಂಬಾ ಅನುಕಂಪ. ವಾರಾನ್ನದ ಹುಡುಗರು ವರ್ಷಪೂರ್ತಿ ಮನೆಮಕ್ಕಳ ಹಾಗೆಯೇ ಅವರ ಮನೆಯಲ್ಲಿರುತ್ತಿದ್ದರು. ಶಿಷ್ಯರು ಯಾವುದೇ ವಯಸ್ಸಿನವರಾಗಿದ್ದರೂ ಶಾಮರಾಯರು ಅವರನ್ನು ‘ಮಗು’ ಎಂದೇ ಕರೆಯುತ್ತಿದ್ದರು. ಅವರೊಬ್ಬ ಅನನ್ಯ ಅಧ್ಯಾಪಕರಾಗಿದ್ದರು. ಅಧ್ಯಾಪಕರ ಕೆಲಸವೆಂದರೆ ವಿಸ್ತಾರವಾದ ಓದು ಮತ್ತು ವ್ಯಾಪಕವಾದ ಬರವಣಿಗೆ ಎಂದವರು ದೃಢವಾಗಿ ನಂಬಿದ್ದರು. ಸುಮಾರು ಎಪ್ಪತ್ತು ವರ್ಷಗಳ ಕಾಲ ವಿರಾಮವಿಲ್ಲದಂತೆ ಬರೆದರು. ಕನ್ನಡ ಪುಸ್ತಕಗಳ ಪ್ರಕಾಶನದ ಹವ್ಯಾಸವನ್ನೂ ಇಟ್ಟುಕೊಂಡಿದ್ದ ಅವರು ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ ಮೂಲಕ ಐವತ್ತಕ್ಕೂ ಹೆಚ್ಚು ಅತ್ಯುತ್ತಮ ಕೃತಿಗಳನ್ನು ಹೊರತಂದರು.
ತ. ಸು ಶಾಮರಾಯರ ಕೃತಿಗಳಲ್ಲಿ ಸಂಶೋಧಕರಿಗೆ ಆಕರ ಗ್ರಂಥದಂತಿರುವ ‘ಶಿವಶರಣ ಕಥಾರತ್ನಕೋಶ’ಕ್ಕೆ ಗ್ರಂಥ ಸಂಪಾದನೆ ಮತ್ತು ಸಂಶೋಧನೆಯ ದೃಷ್ಟಿಯಿಂದ ಅಗ್ರಸ್ಥಾನ ಸಲ್ಲುತ್ತದೆ. ಕಾಲುಶತಮಾನಕ್ಕೂ ಹೆಚ್ಚಿನ ಕಾಲವನ್ನು ಈ ಕೃತಿಯ ರಚನೆಯಲ್ಲಿ ವಿನಿಯೋಗಿಸಿದ ಶಾಮರಾಯರ ಈ ಕೃತಿ ಶಿವಶರಣರ ವಿಚಾರದಲ್ಲಿ ಹೊಸ ಬೆಳಕನ್ನು ಚೆಲ್ಲುವುದು. ವಚನಗಳು ದೊರೆಯದಿರುವ ವಚನಕಾರರ ಹೆಸರುಗಳನ್ನು ಉಲ್ಲೇಖಿಸುವುದು, ಹೊಸ ವಚನಕಾರ ಅಂಕಿತಗಳನ್ನು ಸೂಚಿಸುವುದು ಇತ್ಯಾದಿಗಳ ಮೂಲಕ ವೀರಶೈವ ಕಾವ್ಯಗಳ ಕೈಪಿಡಿಯಾಗಿ ರೂಪುಗೊಂಡಿದೆ.
ಶಾಮರಾಯರು ರಚಿಸಿದ ವಿಮರ್ಶಾತ್ಮಕ ಕಿರುಹೊತ್ತಗೆಗಳಲ್ಲಿ ಪ್ರಮುಖವಾದುದು ‘ರತ್ನಾಕರವರ್ಣಿ’, ‘ಮುದ್ದಣ’, ‘ಪಂಪ’ ಮುಂತಾದವು.
ಹೊಸಗನ್ನಡ ಗದ್ಯಸಾಹಿತ್ಯದ ಮಕುಟಪ್ರಾಯ ಕೃತಿಗಳಲ್ಲಿ ಒಂದಾದ ಎ. ಆರ್. ಕೃಷ್ಣಶಾಸ್ತ್ರಿಗಳ ‘ವಚನ ಭಾರತ’ದಿಂದ ಸ್ಫೂರ್ತಿಗೊಂಡು ಶಾಮರಾಯರು ‘ವಚನ ರಾಮಾಯಣ’ ಮತ್ತು ‘ವಚನ ಭಾಗವತ’ ಕೃತಿಗಳನ್ನು ರಚಿಸಿದರು. ಮೂಲವನ್ನು ಭಾಷಾಂತರಿಸಲು ಹೋಗದೆ ಅಲ್ಲಿನ ವಿಷಯಗಳನ್ನು ಸಾರವತ್ತಾಗಿಯೂ ಸಂಗ್ರಹವಾಗಿಯೂ ಸರಳವಾದ ತಿಳಿಗನ್ನಡದಲ್ಲೂ ತರಬೇಕೆಂಬ ರಾಯರ ಉದ್ದೇಶ ಈ ಕೃತಿಗಳಲ್ಲಿ ಸಫಲವಾಗಿದೆ. ಮೂಲದ ಸೊಗಸು ವಚನರೂಪದಲ್ಲೂ ಮಿಂಚುವಂತೆ ಸ್ವಾರಸ್ಯಕರ ರೀತಿಯಲ್ಲಿ ಕಥಾಭಾಗವನ್ನು ಸಂಗ್ರಹಿಸಿ ಜನಸಾಮಾನ್ಯರೂ ಈ ಮಹತ್ಕೃತಿಗಳ ಸಾರಸರ್ವಸ್ವವನ್ನರಿಯಲು ಶಾಮರಾಯರು ಅನುವು ಮಾಡಿಕೊಟ್ಟು ಕನ್ನಡಿಗರ ಕೃತಜ್ಞತೆಗೆ ಪಾತ್ರರಾಗಿದ್ದಾರೆ.
ಶಾಮರಾಯರು ಗ್ರಂಥ ಸಂಪಾದನೆ ಮತ್ತು ಸಂಗ್ರಹಕಾರ್ಯಗಳಂಥ ಕ್ಲಿಷ್ಟ ಕೆಲಸಗಳಲ್ಲೂ ತಮ್ಮನ್ನು ಆಸಕ್ತಿಯಿಂದ ತೊಡಗಿಸಿಕೊಂಡು ಅಲ್ಲೂ ತಮ್ಮ ಪ್ರತಿಭೆ ವಿದ್ವತ್ತುಗಳನ್ನು ತೋರ್ಪಡಿಸಿದ್ದಾರೆ. ಕುಮಾರವ್ಯಾಸ ಭಾರತದ ಆದಿಪರ್ವ, ಸಭಾಪರ್ವ, ಅರಣ್ಯಪರ್ವ, ವಿರಾಟಪರ್ವ, ಉದ್ಯೋಗಪರ್ವ ಸಂಗ್ರಹಗಗಳನ್ನೊಳಗೊಂಡ ‘ಕನ್ನಡ ಮಹಾಭಾರತ ಸಂಗ್ರಹ ಭಾಗ-೧’ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ‘ಕುಮಾರವ್ಯಾಸ ಭಾರತ’ಗಳನ್ನು ಹೊರತಂದಿದ್ದಾರೆ. ‘ಭರತೇಶ ವೈಭವ’, ಲಕ್ಷ್ಮೀಶನ ‘ಜೈಮಿನಿ ಭಾರತ’, ಅಚ್ಚಣ್ಣ ಕವಿಯ ಚಂಪೂಕಾವ್ಯ ‘ವರ್ಧಮಾನ ಪುರಾಣ’, ರನ್ನನ ಪ್ರೌಢ ಕಾವ್ಯವಾದ ‘ಅಜಿತ ಪುರಾಣ’ ಇವೇ ಮುಂತದವುಗಳನ್ನು ಸಂಗ್ರಹರೂಪವಾಗಿ ಜನರನ್ನು ಸುಲಭವಾಗಿ ತಲುಪಲು ಅರ್ಥೈಸುವಂತೆ ಮಾಡಿದ ಕಾರ್ಯ ಮಹತ್ವಪೂರ್ಣದ್ದಾಗಿದೆ. ‘ಕರ್ಣಾಟಕ ಶಬ್ದಾನುಶಾಸನಂ’ ಎಂಬ ಗ್ರಂಥವನ್ನು ವಿದ್ಯಾರ್ಥಿಗಳಿಗಾಗಿ ಸಂಪಾದಿಸಿ ಅದನ್ನು ಕೂಲಂಕಷವಾಗಿ ವಿಮರ್ಶಿಸಿದ್ದಾರೆ. ‘ಶಬ್ದಮಣಿದರ್ಪಣಂ’ ಕನ್ನಡ ವ್ಯಾಕರಣ ಲೋಕದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಕೃತಿ.
ಶಾಮರಾಯರ ಸಂಕೀರ್ಣ ಕೃತಿಗಳ ಪೈಕಿ ‘ಕಥಾವಲ್ಲರಿ’ ಎಂಟು ಪ್ರಾಚೀನ ಕಾವ್ಯಗಳಿಂದ ಆರಿಸಿದ ಕಥೆಗಳನ್ನು ನಿರೂಪಿಸುವ ಗದ್ಯಕೃತಿ. ಈ ಕೃತಿಯಲ್ಲಿ ಗದ್ಯರೂಪದಲ್ಲಿ ಸರಳವಾಗಿ ಮತ್ತು ಮನನೀಯವಾಗಿ ಹೇಳಿಕೊಂಡು ಹೋಗಿರುವ ಕಥಾಶೈಲಿ ವಿಶಿಷ್ಟವಾದುದಾಗಿದೆ. ಸಿಖ್ ಪಂಥ ಬೆಳೆಯಲು ಕಾರಣೀಭೂತರಾದ ಗುರುನಾನಕರ ಚರಿತ್ರೆ ಶಾಮರಾಯರಿಂದ ‘ಗುರುನಾನಕ್’ ಕೃತಿಯಾಗಿ ಮೈತಳೆದಿದೆ. ನಾಡು ನುಡಿಗಳಿಗಾಗಿ ಶ್ರಮಿಸಿದ ಮಹನೀಯರೂ ರಾಯರ ಸ್ವಂತ ಅಣ್ಣಂದಿರೂ ಆಗಿದ್ದ ಟಿ. ಎಸ್. ವೆಂಕಣ್ಣಯ್ಯನವರನ್ನು ಕುರಿತು ಬರೆದ ಕೃತಿ ‘ತಳುಕಿನ ವೆಂಕಣ್ಣಯ್ಯ’. ಮೇಧಾವಿ ಮತ್ತು ಧೀಮಂತ ವ್ಯಕ್ತಿಯಾಗಿದ್ದವರ ಬದುಕನ್ನು ಸಂಕ್ಷಿಪ್ತವಾಗಿಯೂ ಸಮರ್ಪಕವಾಗಿಯೂ ಚಿತ್ರಿಸುವಲ್ಲಿ ಶಾಮರಾಯರು ಯಶಸ್ವಿಯಾಗಿದ್ದಾರೆ. ವೆಂಕಣ್ಣಯ್ಯನವರ ತಮ್ಮನಾಗಿದ್ದರೂ ರಾಯರು ಎಲ್ಲಿಯೂ ಮಮಕಾರ ತೋರದ ಸಂಯಮಪೂರ್ಣ ಬರವಣಿಗೆಯನ್ನು ಕಾದುಕೊಂಡಿದ್ದಾರೆ.
ಶಾಮರಾಯರು ಆಧ್ಯಾತ್ಮಿಕ ರಂಗದಲ್ಲಿ ಸಾಧನೆಗೈದ ನಾಲ್ವರು ವ್ಯಕ್ತಿಗಳನ್ನು ಕುರಿತು ನಾಲ್ಕು ಕೃತಿಗಳನ್ನು ರಚಿಸಿದರು. ಗೋಲ್ಕೊಂಡದ ರಾಜನಲ್ಲಿ ನೌಕರಿಯಲ್ಲಿದ್ದು ಸೆರೆವಾಸ ಅನುಭವಿಸಿದರೂ ರಾಮಧ್ಯಾನವನ್ನು ಬಿಡದೆ ಭದ್ರಾಚಲದಲ್ಲಿ ನೆಲೆ ನಿಂತು ಪ್ರಸಿದ್ಧರಾದ ರಾಮದಾಸರನ್ನು ಕುರಿತು ಬರೆದ ಕೃತಿ ‘ಭದ್ರಾಚಲ ರಾಮದಾಸರು’; ಧಾರವಾಡ ಜಿಲ್ಲೆಯಲ್ಲಿ ಹುಟ್ಟಿ ತಪಸ್ವಿಗಳಾಗಿ ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳಲ್ಲೆಲ್ಲಾ ಸಂಚರಿಸಿ ತಮ್ಮ ಧ್ಯಾನ ಮಹಿಮೆಯನ್ನು ಲೋಕಕಲ್ಯಾಣಕ್ಕೆ ಬಳಸಿದ ಶೇಷಾಚಲರ ಜೀವನ ಮಹಿಮೆಗಳನ್ನು ಪರಿಚಯಿಸುವ ‘ಶ್ರೀ ಶೇಷಾಚಲರು’; ರಾಜಾಸ್ಥಾನ ಪ್ರಾಂತದ ಕ್ಷತ್ರಿಯ ಮನೆತನದಲ್ಲಿ ಹುಟ್ಟಿದ್ದರೂ ವಿರಕ್ತಯೋಗಿಯ ಜೀವನ ನಡೆಸಿದ ತಪಸ್ವಿಯವರನ್ನು ಕುರಿತ ಕೃತಿ ‘ಶ್ರೀ ತಪಸ್ವಿಜಿ ಮಹಾರಾಜ್’. ಇದನ್ನು ರಾಯರು ನೀಲ ಮೇಘ’ ಎಂಬ ಗುಪ್ತನಾಮದಿಂದ ಬರೆದರು. ಪೋಸ್ಟ್ ಮಾಸ್ಟರ್ ಆಗಿದ್ದ ವೆಂಕಟರಾಮಯ್ಯನವರು ಸನ್ನಡತೆ ಮತ್ತು ತ್ಯಾಗದಿಂದ ಲೋಕಕಲ್ಯಾಣ ಸಾಧಿಸಿದ್ದಕ್ಕೆ ಜೀವಂತ ಸಾಕ್ಷಿಯಾದ ಕತೆಯನ್ನು ನಿರೂಪಿಸುವ ಕೃತಿ ‘ಸ್ವಾಮೀ ಶ್ರೀ ಚಿದಂಬರ’. ‘ಲವ-ಕುಶ’ ಎಂಬ ಕಿರು ಹೊತ್ತಗೆ ಕಿರಿಯ ಓದುಗರಿಗೆ ಹಿರಿಯರ ಪರಿಚಯವನ್ನು ಪರಿಣಾಮಕಾರಿಯಾಗಿ ಮಾಡಿಕೊಡುವ ಕೃತಿ. ಹರಿಹರನ ‘ಅಕ್ಕಮಹಾದೇವಿ ರಗಳೆ’ ಮೂಲಕಾವ್ಯವನ್ನು ಮನದಟ್ಟು ಮಾಡಿಕೊಡಲು ಸೂಕ್ತ ಮಾರ್ಗದರ್ಶಕ ಒದಗಿಸುವ ಕೃತಿ ‘ಹರಿಹರನ ಉಡುತಡಿಯ ಅಕ್ಕಮಹಾದೇವಿಯ ರಗಳೆ’. ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದ ರಾಯರ ‘ಕುಮಾರವ್ಯಾಸ ಭಾರತದ ನಿಘಂಟು’ ಆ ಮಹಾಕಾವ್ಯದ ಅಧ್ಯಯನಕ್ಕೊಂದು ಸಮಗ್ರ ಕೈಪಿಡಿ.
ಇವುಗಳಲ್ಲೆಲ್ಲಾ ಎತ್ತಿಹೇಳಬೇಕಾದ ಕೃತಿಯೆಂದರೆ ‘ಮೂರು ತಲೆಮಾರು’. ಇದು ಶಾಮರಾಯರ ಕುಟುಂಬದ ವೃತ್ತಾಂತವನ್ನು ನಿರೂಪಿಸುವ ವಿನೂತನ ಶೈಲಿಯ ಗದ್ಯಕೃತಿ. ಇದರಲ್ಲಿ ಕಾದಂಬರಿಯ ಸೊಗಸೂ, ಸಣ್ಣಕಥೆಯ ತೀವ್ರತೆಯೂ ಹದವಾಗಿ ಬೆರೆತಿದೆ. ತಳುಕಿನ ವೆಂಕಣ್ಣಯ್ಯನವರ ಮನೆತನದ ಮೂರು ತಲೆಮಾರುಗಳ ಅದ್ಭುತ ಚಿತ್ರಣ ಇದರಲ್ಲಿ ದೊರೆಯುತ್ತದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಇದೊಂದು ಮಹತ್ವದ ಗ್ರಂಥವೆಂದು ಪರಿಗಣಿಸಲ್ಪಟ್ಟಿದೆ.
ಇಷ್ಟೆಲ್ಲಾ ಬಿಡುವಿಲ್ಲದ ಅಧ್ಯಾಪಕ, ಪ್ರಕಾಶಕ, ಲೇಖಕ ಚಟುವಟಿಕೆಗಳ ನಡುವೆಯೂ ಶಾಮರಾಯರು ಪ್ರಬುದ್ಧ ಕರ್ಣಾಟಕ, ವಿದ್ಯಾವಾಹಿನಿ, ಸೇವಾಸದನ, ವಸಂತ ಮುಂತಾದ ನಿಯತಕಾಲಿಕೆಗಳ ಸಂಪಾದಕರಾಗಿ ಸೇವೆಸಲ್ಲಿಸಿ ಆ ಪತ್ರಿಕೆಗಳ ಗುಣಮಟ್ಟವನ್ನು ಎತ್ತರಿಸಿದ್ದುಂಟು.
‘ತಿದ್ದಿಬಾಚಿದ ತಲೆಗೂದಲು, ಗರಿ ಮುರಿಯದ ಜುಬ್ಬ, ಹಾಲು ಬಿಳುಪಿನ ಕಚ್ಚೆಪಂಚೆ, ಮೇಲೊಂದು ಶಲ್ಯ, ಪದೇ ಪದೇ ಮೂಗಿಗೇರಿಸುತ್ತಿದ್ದ ನಶ್ಯ’ ಇದು ಶಾಮರಾಯರ ಪರಿಪೂರ್ಣವಾದ ಚಿತ್ರ. ಕೆಲವು ಕಾಲದ ಅನಾರೋಗ್ಯದ ನಂತರದಲ್ಲಿ ಇನ್ನೇನು ಚೇತರಿಸಿಕೊಂಡಿದ್ದಾರೆ ಎನ್ನುವಷ್ಟರಲ್ಲಿ 1998 ಆಗಸ್ಟ್ 21ರಂದು ಲೌಕಿಕದ ಬದುಕಿಗೆ ವಿದಾಯ ಹೇಳಿಬಿಟ್ಟರು.
ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದ ಶಾಮರಾಯರಿಗೆ ಕರ್ಣಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ಕರ್ಣಾಟಕ ರಾಜ್ಯೋತ್ಸವ ಪ್ರಶಸ್ತಿಗಳ ಜೊತೆಗೆ 1995ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದ್ದ ‘ಚಾವುಂಡರಾಯ ಪ್ರಶಸ್ತಿ’ಯ ಗೌರವವೂ ಪ್ರಪ್ರಥಮವಾಗಿ ಸಂದಿತು. ಶಾಮರಾಯರ ಕೊನೆಗಾಲದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಉನ್ನತ ಪರಂಪರೆಯನ್ನು ಗೌರವಿಸಿತು. ಅವರಿಗೆ ಈ ಗೌರವ ಸಂದಾಗ ಘಟಿಕೋತ್ಸವದಲ್ಲಿ ಹಾಜರಿದ್ದ ವಿದ್ಯಾರ್ಥಿಗಳಿಗೆಲ್ಲಾ ರೋಮಾಂಚನವಾಯಿತು. ಅವರ ಉತ್ತರ ರೂಪದ ಭಾಷಣ ವಿದಾರ್ಥಿಗಳ ಕಣ್ಣಲ್ಲಿ ನೀರಾಡಿಸಿತು. ಕನ್ನಡಿಗರಿಗೆ ಪಿತೃಸದೃಶ ವ್ಯಕ್ತಿಯಂತಿದ್ದ ತ.ಸು ಶಾಮರಾಯರು ತಾವು ಬರೆದುದಕ್ಕಿಂತ ಹೆಚ್ಚಾಗಿ ಹಲವಾರು ಶ್ರೇಷ್ಠಕವಿಗಳನ್ನೂ, ಲೇಖಕರನ್ನೂ, ಶಿಕ್ಷಕರನ್ನೂ ರೂಪಿಸಿದವರು. ವಿದ್ವತ್ತು, ವಿನಯ, ಮಾನವೀಯತೆ ಮತ್ತು ಆದರ್ಶಪ್ರಾಯವಾದ ಶಿಕ್ಷಕವೃತ್ತಿಯ ಒಂದು ವಿಶಿಷ್ಟ ಮಾದರಿಯಾಗಿ ಅವರು ಸದಾ ಸ್ಮರಣೀಯರು.
ಈ ಮಹಾನ್ ಚೇತನಕ್ಕೆ ಶಿರಬಾಗಿ ನಮನಗಳು.