ಜಯಶ್ರೀ .ಜೆ. ಅಬ್ಬಿಗೇರಿ ಪುನಃ ಪುನಃ ಕೇಳಿದರೂ ನಿನ್ನ ವಿನಃ ಏನಿಲ್ಲ.
Vijaya darpana. June 07
ಲಹರಿ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
ಪುನಃ ಪುನಃ ಕೇಳಿದರೂ ನಿನ್ನ ವಿನಃ ಏನಿಲ್ಲ
ಹೇ, ಸುಂದರೇಶ,
ನನ್ನಷ್ಟು ಸುಂದರಿ ಯಾರೂ ಇಲ್ವೇನೋ ಅನ್ನೋ ತರ ನನ್ನನ್ನೇ ನೀನು ಕಣ್ಣಗಲಿಸಿ ನೋಡೋದನ್ನ ನನ್ನ ಕಣ್ಣಗಳು ಅದ್ಹೇಗೆ ಮರೆಯಲು ಸಾಧ್ಯ ಹೇಳು ಗೆಳೆಯ? ಅರ್ಧ ರಾತ್ರಿ ಸರಿದರೂ ರೆಪ್ಪೆಗಳು ಅಂಟುತ್ತಿಲ್ಲ. ನೀ ಬರುವ ದಾರಿಯನ್ನು ಕಿಟಕಿಯಲ್ಲಿ ಇಣುಕಿ ನೋಡುವ ಚಾಳಿ ಬಿಟ್ಟಿಲ್ಲ. ಇನ್ಮೇಲೆ ನೀ ಬರುವ ಸಂಭವ ಕಮ್ಮಿ ಅಂತ ಗೊತ್ತಿದ್ದರೂ ಹಟ ಮಾಡುವ ಮನಸ್ಸು ಕೋಣೆಯನ್ನು ಕತ್ತಲಾಗಿಸಿ ಪರದೆ ಸರಿಸಿ ನಿಲ್ಲುವಂತೆ ಒತ್ತಾಯಿಸುತ್ತದೆ. ಯಾರ ಮಾತುಗಳೂ ಕಿವಿಗೆ ಬೀಳುತ್ತಿಲ್ಲ. ಬಿದ್ದರೂ ಅರ್ಥವಾಗುವುದು ತುಂಬಾ ಕಮ್ಮಿ. ಕೈಯಲ್ಲಿ ಪುಸ್ತಕ ಹಿಡಿದರೆ ಅದರಲ್ಲೂ ನಿನ್ನ ಕುಡಿ ಮೀಸೆ ಅಡಿಯ ತುಂಟ ನಗೆ ಕಾಡುವುದು. ಕೈಯಲ್ಲಿ ಪೆನ್ನು ಹಿಡಿದರೆ ನನ್ನ ನಿನ್ನ ಹೆಸರು ಸೇರಿಸಿ ಬರೆದು ಖುಷಿ ಪಟ್ಟು ಕುಣಿಯುತ್ತದೆ ಹೃದಯ.
ಬೀಸುವ ತಂಗಾಳಿಗೆ ನನ್ನ ಮುಂಗುರುಳು ಕೆನ್ನೆ ಮೇಲಾಡಿದಾಗ ನಿನ್ನ ಬೆರಳುಗಳೇ ತಾಗಿದವೆನೋ ಎಂದೆನಿಸಿ ಪುಳಕಗೊಳ್ಳುವ ಮನ. ನಿನ್ನ ಗುಂಗಲ್ಲಿ ಏನೇನೋ ಮೇರೆ ಮೀರಿದ ಕನಸು ಕಾಣಲು ಶುರು ಹಚ್ಚಿಕೊಳ್ಳುತ್ತೆ. ನಿನ್ನ ಇಷ್ಟದ ಹಾಡಿನಂತೆ ಪುನಃ ಪುನಃ ಕೇಳಿದರೂ ನಿನ್ನ ವಿನಃ ಏನಿಲ್ಲ ಎಂದು ರಚ್ಚೆ ಹಿಡಿಯುತ್ತಿದೆ. ಮನಸ್ಸು ಯಾಕೆ ಹೀಗೆ ಸಣ್ಣ ಮಗು ತರ ಹಟ ಹಿಡಿದಿದೆ ತಿಳಿಯುತ್ತಿಲ್ಲ.
ಮತ್ತೆ ಮತ್ತೆ ನೀನೇ ಬೇಕೆಂದು ನಿನ್ನ ಸನಿಹವೇ ಬೇಕೆಂದು ಕಿವುಡನಿಗೂ ಕೇಳುವ ಹಾಗೆ ಜೋರಾಗಿ ಚೀರಿ ಚೀರಿ ಹೇಳುತ್ತಿದೆ. ನೀನಾಡಿದ ಮಾತುಗಳೆಲ್ಲ ಕಿವಿಯಲ್ಲಿ ಗುಂಯ್ಯಗುಡುತ್ತಿವೆ. ಊಹೂಂ ಅದೆಷ್ಟು ಸಮಾಧಾನಿಸಿದರೂ ಪದೇ ಪದೇ ಕಾಡತೊಡಗಿದೆ. ನೀನಿದ್ದ ಕಡೆ ಓಡು ಎನ್ನುತ್ತಿದೆ. ಕಾಲು ಎತ್ತಿಟ್ಟಾಗ ಹೃದಯ ಹಿಂಜರಿಯುತ್ತದೆ. ಹೃದಯಕ್ಕೆ ನಾನು ಸಮಜಾಯಿಷಿ ಹೇಳಿದರೆ ಒಮ್ಮೊಮ್ಮೆ ಹೃದಯವೇ ನನಗೆ ತಿಳಿ ಹೇಳುತ್ತದೆ. ನಿನ್ನ ಒಂದೇ ಒಂದು ಮಾತು ಅದೇ ಮೂರು ಪದದ (ಐ ಲವ್ ಯೂ) ಮಾತು ಸಾವಿರ ಸಾವಿರ ಮಾತಾಗಿ ಮಾರ್ಧನಿಸಿ ಹಿತವಾದ ನಡುಕ ಹುಟ್ಟಿಸುತ್ತಿದೆ.
ತುರ್ತು ಕೆಲಸವಿದ್ದಂತೆ ಸೂರ್ಯ ಡ್ಯೂಟಿಗೆ ಹಾಫ್ ಡೇ ರಜೆ ಹಾಕಿ ಹೋದನೇನೋ ಎಂಬಂತೆ ಭಾಸವಾಗುತ್ತಿದೆ.
ಈ ದೊಡ್ಡ ರಾತ್ರಿಯ ಚಂದಿರ ಯಾಕಾದರೂ ಬರುತ್ತಾನೆನೋ ಎಂದೆನಿಸುತ್ತದೆ. ರಾತ್ರಿ ಸಮಯ ಕಳೆಯುವುದೇ ದುಸ್ತರ. ಹಗಲು ಹನ್ನೆರಡು ತಾಸು ನನ್ನ ಹೆಜ್ಜೆಯ ಗೆಜ್ಜೆ ನಾದ ಕೇಳಲು ನಿನ್ನ ಕಿವಿಗಳು ನಿಮಿರುವುದನ್ನು ಕಣ್ಣಾರೆ ಕಂಡು ಆಗಲೇ ಓಡಿ ಬಂದು ನಿನ್ನ ಮುದ್ದು ಮಾಡಿ ಬಿಡಲೇ ಎಂದೆನಿಸಿದ್ದೂ ಉಂಟು. ಅಷ್ಟು ದೂರ ಕ್ಯಾಂಪಸ್ಸಿನಲ್ಲಿ ನಿಂತಿರುವ ನೀನು ಹತ್ತಿರ ಬಂದು ಕಿವಿಯಲ್ಲಿ ಮಾತುಗಳನ್ನಾಡುವಾಗ ಬೆರಳುಗಳು ತನು ಸೋಕಿದಂತೆಸನಿಸಿ ಇಡೀ ದೇಹ ಸಣ್ಣಗೆ ಕಂಪಿಸಿ ಒಮ್ಮೆಲೇ ಬೆಚ್ಚಿ ಬೀಳುತ್ತೇನೆ. ಸುತ್ತಲೂ ಮುತ್ತಿರುವ ನನ್ನ ಗೆಳತಿಯರು ನಿನಗೆ ಸದಾ ಅವನದೇ ಧ್ಯಾನ ಎಂದು ಛೇಡಿಸಿದಾಗ ಎಲ್ಲೆ ಮೀರಿದ ಮನಸ್ಸು ವಾಸ್ತವಕ್ಕೆ ಮರಳುತ್ತಿತ್ತು.
ಅಂದು ನೀನು ಪಡ್ಡೆ ಹುಡುಗ ಎಂದು ಸಲ್ಲದ ಹಾದಿ ಸಹಿಸದೇ ನನ್ನಪ್ಪ ನಿನ್ನನ್ನು ನಿರಾಕರಿಸಿದ್ದ. ನೀನೀಗ ದುಡಿಯುವ ಗಂಡಸು. ಸಂಸಾರದ ನೊಗ ಹೊರುವಷ್ಟು ಗಟ್ಟಿಯಾಗಿದ್ದಿಯಾ ಹಿಂದಿನ ಭಯ ಆತಂಕ ಮೂಟೆಯಲ್ಲಿ ಕಟ್ಟಿಟ್ಟು ನನ್ನಪ್ಪನ ಬಳಿ ನನ್ನ ಕೈಗಳನ್ನು ಕೇಳು ಖಂಡಿತ ನಿನ್ನ ಕೈಗಳಿಗೆ ನನ್ನ ಕೈ ಜೋಡಿಸುತ್ತಾನೆ.
ನೀನೇ ನನ್ನ ಕನಸಿನ ರಾಜಕುಮಾರ ನಿನ್ನೊಂದಿಗೆ ಮುಂದಿನ ಜೀವನ ಪಯಣ. ಮುಂಜಾವಿನ ಮಂಜಿಗೆ ಕಾಯಿಸಬೇಡ. ಚಂದಿರ ಬೆಳದಿಂಗಳೊಂದಿಗೆ ಹಿಗ್ಗಿ ನಲಿಯುವ ಸಮಯಕೆ ಅದೇ ಕಿಟಕಿಯ ಪರದೆಯ ಹಿಂದೆ ನಿಂತು ನಿನಗಿಷ್ಟವಾಗುವ ನನ್ನ ಮುಗಳ್ನಗೆ ಚೆಲ್ಲಿ ಕಾಯುತ್ತಿರುವೆ ಬಂದು ಬಿಡು ಕತ್ತಲೆಯಿಂದ ಬೆಳಕಿಗೆ ಬಂದಂತೆ ಸಂಭ್ರಮಿಸಿ ಜೋಡಿ ಹಕ್ಕಿಯಂತೆ ಜೋಡಿಯಾಗಿ ಕಣ್ಣು ಕಂಡ ನೂರಾರು ಕನಸುಗಳನು ಮಾಗಿದ ಮನಸ್ಸುಗಳ ಕೈಯಲ್ಲಿ ಕೊಟ್ಟು ನನಸಾಗಿಸಿ ಒಬ್ಬರಿಗೊಬ್ಬರು ಪ್ರೀತಿಸುವುದನು ಕಲಿಸಿ ಕಲಿಯೋಣ.
ನಿನ್ನ ಬರುವಿಕೆಗೆ ಕಣ್ಣು ಬಿಟ್ಟು ಕಾಯುತ್ತಿರುವನಿನ್ನ ಮುದ್ದು ಸುಂದರಿ.