ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ : ಶೋಭಾ ಹೆಚ್ ಜಿ
ವಿಜಯ ದರ್ಪಣ ನ್ಯೂಸ್… ದೇವನಹಳ್ಳಿ, ಬೆಂಗಳೂರು ಗ್ರಾ . ಜಿಲ್ಲೆ
ವಿಶ್ವ ಪರಿಸರ ದಿನಾಚರಣೆ ಜೂನ್ 05
ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ!
ಪ್ರಕೃತಿ ಮನುಷ್ಯನ ಜೀವನಕ್ಕೆ ಏನ್ನೆಲ್ಲ ಕೊಟ್ಟಿಲ್ಲ. ಅಂತಹದರಲ್ಲಿ ಮನುಷ್ಯ ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ. ಇಂತ ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಸರ್ವನಾಶ ನಮ್ಮ ಕಣ್ಣೇದುರೆ ನಡೆಯಲಿದೆ. ಇದು ನಡೆಯಬಾರದೆಂದರೆ ಇಂದಿನಿಂದಲೆ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಪರಿಸರದ ಸಂರಕ್ಷಣೆಗಾಗಿ ನಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತುವ ಅವಶ್ಯಕತೆ ಇಲ್ಲ. ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರ ಉಳುವಿಗೆ ಸಹಾಯಕವಾಗುತ್ತದೆ.
ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಪರಿಸರದ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ. ಆದರೆ ಅದು ಅಷ್ಟು ಸುಲಭವಲ್ಲ, ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಆವಿಷ್ಕರದಿಂದ ಇಂದಿನ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಇದರಿಂದ ಹೆಚ್ಚಿನ ಮನುಷ್ಯರು ಪ್ರಕೃತಿಯಿಂದ ದೂರಾಗಿ ವಿವಿಧ ಅನೈಸರ್ಗಿಕ ಚಟುವಟಿಕೆಗಳಲ್ಲಿ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ
ಮನುಷ್ಯನ ಉದಾಸೀನತೆ, ತಿಳಿಗೇಡಿತನದಿಂದ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ, ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗೀದಾರರು ಎಂಬುದು ಕೂಡ ನಮಗೆಲ್ಲರಿಗೂ ಈಗ ಚೆನ್ನಾಗಿ ಗೊತ್ತಾಗಿರುವ ಸತ್ಯ. ಈ ಬಗ್ಗೆ ಕಾಳಜಿ, ಚಿಂತೆ ಇರುವವರನ್ನೂ ಗಾಢವಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ ? ಈ ನಿಟ್ಟಿನಲ್ಲಿ ನಾವೇನು ಮಾಡಬಹುದು?
ಪರಿಸರದ ಸಂರಕ್ಷಣೆ ಬಗ್ಗೆ ಗಮನಿಸಬೇಕಾದ ಅಂಶಗಳು
* ಜನಸಂಖ್ಯೆ – ಹೆಚ್ಚಳ-ಕಡಿತ ಹಾಗೂ ಅವರ ಒಟ್ಟಾರೆ ಬೇಡಿಕೆಯ ಮೇಲಿನ ಪರಿಣಾಮ
* ಆಹಾರ, ಕೃಷಿ – ಕೀಟನಾಶಕಗಳ ಬಳಕೆ, ಸಾವಯವ ಕೃಷಿಯ ಬೆಳವಣಿಗೆ, ಪ್ರಾಣಿಮೂಲ ಆಹಾರದಿಂದ ಪರಿಸರಕ್ಕೆ ಆಗುವ ಆಘಾತ
* ಜನರು, ಸಂಘ-ಸಂಸ್ಥೆಗಳು ? ಪರಿಸರಕ್ಕೆ ಅವರ ಕೊಡುಗೆಗಳು, ಪಾತ್ರ ಹಾಗೂ ಅವರ ನೈಜ ಉದ್ದೇಶಗಳು
* ತ್ಯಾಜ್ಯ- ಉತ್ಪಾದನೆ, ಸಂಸ್ಕರಣೆ ಹಾಗೂ ವಿಲೇವಾರಿ
* ನೀರು – ಬಳಕೆಯ ಪ್ರಮಾಣ, ಮಳೆನೀರಿನ ಇಂಗುವಿಕೆಯ ಪ್ರಮಾಣ, ವಿವಿಧ ಮೂಲಗಳ ಸ್ಥಿತಿಗತಿ
* ಸ್ಥಳೀಯ ಸಂಸ್ಕೃತಿ, ಹಿರಿಯರ ಜೀವನಕ್ರಮ – ಅದರಲ್ಲಿರುವ ಒಳಿತು-ಕೆಡುಕುಗಳು (ಪರಿಸರದ ದೃಷ್ಟಿಯಿಂದ)
* ಇಂಧನ-ಶಕ್ತಿ- ಬಳಕೆಯ ಪ್ರಮಾಣ, ನವೀಕರಣಗೊಳ್ಳುವ ಮೂಲಗಳ ಶೇಕಡಾವಾರು ಕೊಡುಗೆ
* ನೆಲ – ಬಳಕೆಯಲ್ಲಿ ಆಗುತ್ತಿರುವ ವ್ಯತ್ಯಾಸಗಳು ? ಕಾಡು ಕೃಷಿಭೂಮಿಯಾಗುವುದು, ಕೃಷಿಭೂಮಿ ನಿವೇಶನಗಳಾಗುವುದು.
* ಆರ್ಥಿಕತೆ – ಏರಿಳಿತದಿಂದ ಜನರ ಜೀವನಶೈಲಿ, ಅವರ ಬೇಡಿಕೆಗಳು ಹಾಗೂ ಪರಿಸರದ ಮೇಲೆ ಆಗುವ ಪರಿಣಾಮ.
* ಸ್ಥಳೀಯ ಪ್ರಾಣಿ-ಪಕ್ಷಿ-ಜಲಚರಗಳು ಅವುಗಳ ಜೀವನಕ್ರಮ, ಅವುಗಳ ಉಳಿವಿಗೆ ಅವಶ್ಯವಾದ ಪರಿಸರ ಸಂರಕ್ಷಣೆ .
ಪರಿಸರ ರಕ್ಷಣೆಗಾಗಿ ನಾವು ಮಾಡಲೇಬೇಕಾದ ಸಂಗತಿಗಳು
ಪುನರ್ ಬಳಕೆಯಂತ ವಸ್ತುಗಳನ್ನು ಸುಮ್ಮನೆ ಬಿಸಾಡಬೇಡಿ, ಮರುಬಳಕೆ ಮಾಡಿ. ನಿಮಗೆ ಬೇಡದಿದ್ದರೆ ಇತರರಿಗಾದರೂ ದಾನ ಮಾಡಿ. ತಿದಿನದ ಜೀವನದಲ್ಲಿ ಅಥವಾ ಸಮಾರಂಭಗಳ ಸಂದರ್ಭದಲ್ಲಿ ಸುಲಭದಲ್ಲಿ ಮಣ್ಣಾಗಿ ಹೋಗುವ ಪರಿಸರ ಸ್ನೇಹೀ ಉತ್ಪನ್ನಗಳನ್ನು ಬಳಸುವುದು.
ಉದಾ: ಪ್ಲಾಸ್ಟಿಕ್ ಚೀಲದ ಬದಲು ಕಾಗದ ಅಥವಾ ಬಟ್ಟೆಯ ಚೀಲ, ಪ್ಲಾಸ್ಟರ್ ಆಫ್ ಪ್ಯಾರಿಸ್ ಬದಲು ಮಣ್ಣಿನ ಗಣೇಶ, ಪ್ಲಾಸ್ಟಿಕ್ ಗೋಣಿಗಳ ಬದಲು ಸೆಣಬಿನ ನಾರಿನ ಗೋಣಿ. ಎಸೆಯುವ ಸಂಸ್ಕೃತಿ’ಯ ಬದಲು ’ರಿಪೇರಿ ಸಂಸ್ಕೃತಿ’ಯನ್ನು ಅಳವಡಿಸಲು ಸಾಧ್ಯವೋ ಎಂಬುದನ್ನು ನೋಡಿ. ನೆಯಲ್ಲಿಯೇ ಜೈವಿಕ, ಹಸಿ ತ್ಯಾಜ್ಯಗಳ ಸಂಸ್ಕರಣೆ ಮಾಡಿ (ಉದಾ: ಅಡುಗೆಮನೆಯ ಆಹಾರ ತ್ಯಾಜ್ಯ, ಉದ್ಯಾನವನದ ಹಸಿರು ತ್ಯಾಜ್ಯ). ಇದರಿಂದ ನೀವು ಮನೆಯಲ್ಲಿಯೇ ಪರ್ಯಾಯ ಇಂಧನ ಅಥವಾ ಗೊಬ್ಬರ ತಯಾರಿಸಬಹುದು, ಬೀದಿಯಲ್ಲಿರುವ ದನಗಳು, ನಾಯಿಗಳು ಪ್ಲಾಸ್ಟಿಕ್ ತಿನ್ನುವುದನ್ನೂ ತಪ್ಪಿಸಬಹುದು. ಇದನ್ನು ಅಪಾರ್ಟ್‌ಮೆಂಟಿನಲ್ಲಿರುವವರೂ ಮಾಡಬಹುದು.
ಅಪಾಯಕಾರಿ ತ್ಯಾಜ್ಯಗಳನ್ನು ಮಕ್ಕಳ ಕೈಗೆ ಸಿಗದಂತೆ ಸಂಗ್ರಹಿಸಿ ಜಾಗ್ರತೆಯಾಗಿ ವಿಲೇವಾರಿ ಮಾಡಿ. ಉದಾ: ಟ್ಯೂಬ್‌ಲೈಟುಗಳು, ಸಿ.ಎಫ್.ಎಲ್. ಬಲ್ಬುಗಳು, ಇಲೆಕ್ಟ್ರಾನಿಕ್ ಉಪಕರಣಗಳು ಅಥವಾ ಬಿಡಿಭಾಗಗಳು.ವಿಂಗಡನೆ ಮಾಡಿ ವಿಲೇವಾರಿ ಮಾಡುವ ಪ್ರಬುದ್ಧ ವ್ಯವಸ್ಥೆ ಇಲ್ಲದಿದ್ದಲ್ಲಿ ಅದಕ್ಕೋಸ್ಕರ ಒತ್ತಾಯಿಸಿ, ವಿಂಗಡನೆ ಮಾಡುವುದು ನಿಮ್ಮ ಜವಾಬ್ದಾರಿ, ಆದರೆ ಅದರ ಮುಂದಿನ ವ್ಯವಸ್ಥೆಯನ್ನು ಕೇಳುವುದು ನಿಮ್ಮ ಹಕ್ಕು.
* ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಹೆಚ್ಚಾಗಿ ಬಳಸಲು ಪ್ರಯತ್ನ ಮಾಡಿ. ಇದರಿಂದ ಪರಿಸರವೂ ಉಳಿಯುತ್ತದೆ, ದೇಶದ ಪೆಟ್ರೋಲಿಯಂ ಆಂದಿನ ಹೊರೆಯೂ ಕಮ್ಮಿಯಾಗುತ್ತದೆ. ನಿಮ್ಮ ಮನೆಯೊಳಗೆ ಉತ್ತಮ ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಿ, ಹಗಲು ಹೊತ್ತನ್ನು ಚೆನ್ನಾಗಿ ಉಪಯೋಗಿಸಿ. ಆಗ ಫ್ಯಾನ್, ವಾತಾನುಕೂಲಿ, ವಿದ್ಯುತ್ ದೀಪಗಳು, ಇವೆಲ್ಲದರಲ್ಲಿ ವಿದ್ಯುತ್ ಶಕ್ತಿಯನ್ನು ಉಳಿಸಬಹುದು. ನವೀಕರಿಸಲು ಸಾಧ್ಯವಿರುವ ಮೂಲಗಳನ್ನು ಉಪಯೋಗಿಸಿ. ಉದಾ: ಸೋಲಾರ್ ನೀರಿನ ಹೀಟರ್, ಸೋಲಾರ್ ದೀಪಗಳು
* ಸಾಧ್ಯವಾದಾಗಲೆಲ್ಲಾ ರಾಸಾಯನಿಕ ಮುಕ್ತ, ಸಾವಯವ ಹಾಗೂ ಸಸ್ಯಮೂಲದ ಆಹಾರ ಪದಾರ್ಥಗಳನ್ನೇ ಖರೀದಿಸಿರಿ. ಇದರಿಂದ ಪರಿಸರಕ್ಕೂ ನಿರಾಳ, ನಿಮ್ಮ ಆರೋಗ್ಯಕ್ಕೂ ವರದಾನ.
* ಸುತ್ತಮುತ್ತಲೂ ಹಸಿರು ಹೆಚ್ಚುವಂತೆ ಪ್ರಯತ್ನ ಮಾಡಿ. ನಿಮ್ಮ ಹುಟ್ಟುಹಬ್ಬದಂದು, ಇತರ ವಿಶೇಷ ದಿನಗಳಂದು ಗಿಡ ನೆಡುವ ಕಾರ್ಯ ಕೈಗೊಳ್ಳಿ, ಅದನ್ನು ನೀರೆರೆದು ಪೋಷಿಸಲು ಮರೆಯಬೇಡಿ.
* ಇಂಗು ಗುಂಡಿಗಳನ್ನು ಸ್ಥಾಪಿಸಿ. ಮನೆಯ ಸುತ್ತಮುತ್ತಲೂ ಹರಿದು ಪೋಲಾಗಿಹೋಗುವ ಮಳೆನೀರನ್ನು ಇಂಗಿಸಲು ವ್ಯವಸ್ಥೆ ಕಲ್ಪಿಸಲು ಸಾಧ್ಯವಾದರೆ ಮಾಡಿ.
ಶೋಭಾ.ಹೆಚ್.ಜಿ, ಪತ್ರಕರ್ತೆ ದೂ: 9448945367