ಮಿಡಿದ ನಿನ್ನ ಹೃದಯದಲ್ಲಿ… ಜಯಶ್ರೀ.ಜೆ.ಅಬ್ಬಿಗೇರಿ
ಲಹರಿ ಸಂಗಾತಿ
ಮಡಿದ ಹೃದಯದಲ್ಲಿ
ಕೊಡಲೆ ನಾ ಹಾಜರಿ…
ಜಯಶ್ರೀ.ಜೆ.ಅಬ್ಬಿಗೇರಿ
ನನ್ನೊಲವಿನ ರಾಧಾ,
ನೀ ಚೂರು ಮರೆಯಾದರೂ ಸಾಕು ಈ ಜೀವ ಚಡಪಡಿಸುತ್ತದೆ. ನಿನ್ನ ಮುಂಗುರುಳಗಳ ಜೊತೆ ಆಟವಾಡುವ ಕೈ ಬೆರಳುಗಳು ಜೀವ ಹಿಂಡುತ್ತವೆ. ನಿನ್ನೊಂದಿಗೆ ನವಿರಾದ ಒಲವಿನ ಜಂಟಿ ಖಾತೆ ತೆರೆದಾಗಿನಿಂದ ಲೋಕವೇ ಮರೆತು ಹೋಗಿದೆ. ನನಗೇ ಗೊತ್ತಾಗದಂತೆ ಎದೆಯ ಗೂಡಿನಲ್ಲಿ ನೀನು ಬಚ್ಚಿಟ್ಟುಕೊಂಡು ಅದೇನೇನೋ ಆಟ ಆಡಸ್ತಿದಿಯಾ ಕಣೆ. ನಿನ್ನ ಹಾಗೆ ನನ್ನ ಬೇರೆ ಯಾರೂ ಸೆಳೆದಿಲ್ಲ ನಿನ್ನ ಕುಡಿನೋಟಕೆ ಕ್ಷಣಾರ್ಧದಲ್ಲಿ ಬಿದ್ದು ಹೋದೆ. ಹಗಲು ಇರಳು ಪರಿವೆಯೇ ಇಲ್ಲ ನಿನ್ನದೇ ಜಪ ಹೋದಲ್ಲಿ ಬಂದಲ್ಲಿ. ಬೇರೆ ಯಾರೂ ಬೇಕಿಲ್ಲ ಬರೀ ನೀನು ಇದ್ದರೆ ಸಾಕು. ಅನಿಸುತ್ತಿದೆ. ಪ್ರೀತಿಯಲ್ಲಿ ಬಿದ್ದ ಮೇಲೆ ಈ ಥರ ಏನೋ ಒಂಥರ ಆಗುತ್ತೆ ಅಂತ ಗೆಳೆಯರಿಂದ ಕೇಳಿದ್ದೆ. ಮನಸಾರೆ ನಾವಿಬ್ಬರೂ ಒಂದಾದ ಮೇಲೆ ಅದು ಸರಿ ಅನಿಸುತ್ತಿದೆ. ನೀನೇ ಲೈಲಾ ನಾನೇ ಮಜನು. ಬೆಳಗಾದರೆ ನಿನ್ನದೇ ಬೆಳಕು ಅದಕೆ ಅಂಟಿಕೊಂಡ ನೆರಳು ಕೂಡ ನಿನ್ನದೇ ನನ್ನ ಕೆನ್ನೆ ಮೇಲೆ .ನೀನು ಕೆಂದುಟಿಯಿಂದ ಒತ್ತಿದ ಮುದ್ರೆಯನ್ನು ಕನ್ನಡಿ ಮುಂದೆ ನಿಂತು ನೆನಪಿಸಿಕೊಳ್ತಿನಿ. ನೀನು ಪುನಃ ಪುನಃ ಮುದ್ರೆ ಒತ್ತಿದ ಹಾಗೆನಿಸಿ ರೋಮಾಂಚನಗೊಳ್ತಿನಿ. ಹೀಗೆ ಹಗಲು ಹನ್ನೆರಡು ತಾಸು ಕಣ್ಣು ತೆರೆದರೂ ಮುಚ್ಚಿದರೂ ಕಾಡ್ತಿಯಾ. ರಾತ್ರಿ ಕನಸಲ್ಲೂ ನಿನ್ನದೇ ಅಬ್ಬರ. ನಿನ್ನೊಲವಿನ ಪುಸ್ತಕದಲ್ಲಿ ಅದೆಷ್ಟು ಬೆರಗುಗಳಿವೆ. ಅದನ್ನು ಇಡಿಯಾಗಿ ಮತ್ತೆ ಮತ್ತೆ ಓದಬೇಕು ಎಂಬ ಕುತೂಹಲ ತಣ್ಣಗಾಗಲು ಅದೆಷ್ಟು ಜನುಮಗಳು ಬೇಕೋ ಗೊತ್ತಿಲ್ಲ ಗೆಳತಿ.
ಯಾವುದಕ್ಕೂ ಜಗ್ಗದ ಬಗ್ಗದ ಮನದಾಳದ ಹಳೆಯ ಗಾಯವೊಂದು ಮಾಯವಾಗಲು ನೀನೇ ಕಾರಣ ಅಲ್ಲವೇ ಗೆಳತಿ. ಕೆಳ ಜಾತಿಯ ನಿರ್ಗತಿಕನೆಂದು ಚುಚ್ಚಿದ ಮಾತುಗಳಿಗೆ ನೊಂದ ಜೀವಿಯಾದ ನನಗೆ, ನೀನು ಸಂತೈಸಿದ ಪರಿ ನೆನೆದರೆ ನೀನು ದೇವತೆಯೇ ಸರಿ.ವಯಸ್ಕ ಜೀವನದ ಹಂತದಲ್ಲೂ ಖಿನ್ನತೆ ಆತಂಕಕ್ಕೆ ಬಲಿಯಾಗಿ ನರಳುತ್ತಿದ್ದ ನನ್ನ ಕಣ್ಣೀರಿಗೆ ನೀನು ಕೈ ಬೆರಳಾದೆ. ಮಾನಸಿಕ ಮತ್ತು ಭಾವನಾತ್ಮಕ ದೌರ್ಜನ್ಯಕ್ಕೊಳಗಾದ ನನ್ನಲ್ಲಿ ಕತ್ತು ಹೊಸಕಿ ಹೋಗಿದ್ದ ಸುಂದರ ಭಾವನೆಗಳಿಗೆ ಜೀವ ತುಂಬಿದೆ.ಅಸಲಿಗೆ ಅಸಲಿಯತ್ತನ್ನು ಎದುರಿಸುವ ಛಲ ಎದೆಯಲ್ಲಿ ತುಂಬಿದ ಮಾಯಗಾತಿ ನೀನು. ಹಾಗಾದರೆ ಹೀಗಾದರೆ ಸೋಲಾದರೆ ನೋವಾದರೆ ಎಂಬ ‘ರೆ’ ಪ್ರಪಂಚದಲ್ಲಿ ಬದುಕುತ್ತಿದ್ದ ನನ್ನ ಬದುಕನ್ನು ವಾಸ್ತವ ಲೋಕದಲ್ಲಿ ಮರಳಿ ಅರಳುವಂತೆ ಮಾಡಿದವಳು. ಸುಂದರ ಸುಳ್ಳುಗಳ ಮೂಲಕ ಕರಾಳ ಸತ್ಯಗಳಿಗೆ ತೆರೆದುಕೊಳ್ಳುವ ಧೈರ್ಯ ತಂದೆ. ಮನದ ಗಾಯವನ್ನು ಮಾಯಗೊಳಿಸಿದ ಪ್ರೇಮ ದೇವತೆಯೇ ನಿನಗೆ ಅದೆಷ್ಟು ಕೃತಜ್ಞತೆ ಹೇಳಿದರೂ ಸಾಲದು. ಮನಸ್ಸನ್ನು ಸರಿ ಪಡಿಸುವುದು ರಾತ್ರೋ ರಾತ್ರಿಯ ಕೆಲಸವಲ್ಲ. ಸಹನೆ ಕಳೆದುಕೊಳ್ಳದೇ ಬದುಕು ಒಂದು ಚಕ್ರ ಎಂದು ಕಲಿಸಿಕೊಟ್ಟೆ. “ಏನಾಗುತ್ತೋ ಆಗಲಿ ಒಂದ್ಸಾರಿ ಪ್ರೀತ್ಸಿ ನೋಡೋ ಪ್ರೀತಿಲಿರೋ ತಾಕತ್ತು ಗೊತ್ತಾಗುತ್ತೆ.” ಎಂದು ಆಕಾಶದಲ್ಲಿರುವ ನೀನು ಭೂಮಿಯಲ್ಲಿದ್ದ ನನ್ನ ಒಲವಿನ ಬಾನಿಗೆ ಹಾರುವಂತೆ ಮಾಡಿದೆ.
ಅಂತೂ ಇಂತೂ ಎದೆಯಲ್ಲಿ ಪ್ರೀತಿಯ ನಗಾರಿ ಸದ್ದು ಮಾಡತೊಡಗಿತು. ಅಪರೂಪದ ರೂಪ ನನ್ನ ಮೇಲೆ ದಾಳಿ ಮಾಡಿದಂತಾಯಿತು. ಜಗತ್ತು ಈಗ ಅತಿ ಸುಂದರ. ಹೃದಯ ಪ್ರೇಮಲೋಕದಲ್ಲಿ ರಾಜಾರೋಷವಾಗಿ ತಿರುಗುತ್ತಿದೆ ಒಲವಿನ ಉಯ್ಯಾಲೆಯಲಿ ತೇಲುತಿಹೆನು. ಎದೆಯ ಬಾಗಿಲಿನ ಕರೆಗಂಟೆ ಒತ್ತಿ ಹೀಗೆ ಮರೆಯಾಗಿ ಎಲ್ಲಿ ಹೋದೆ ಗೆಳತಿ? ಉತ್ತರ ಸಿಗುತ್ತಿಲ್ಲ. ಅತಿ ಹೊಸತು ನನಗೆ ಈ ಅನುಭವ. ಎದೆ ಬೀದಿಯನ್ನು ಸ್ವಚ್ಛಗೊಳಿಸಿ ಒಲವ ಚುಕ್ಕೆಯಿಟ್ಟು ಚೆಂದದ ರಂಗೋಲಿ ಬಿಡಿಸದೇ ಹೋದರೆ ಹೇಗೆ ಹೇಳು ಸುಂದರಿ.
ಮಿಡಿವ ನನ್ನ ಹೃದಯದಲ್ಲಿ ದಿನವೂ ತಪ್ಪದೇ ಹಾಜರಿ ಹಾಕುವೆ ಎಂದೆ. ಇಡೀ ದಿನ ಮುದ್ದು ಮಾಡೋದೇ ನಿನ್ನ ಖಾಯಂ ಕೆಲಸ ಅಂತ ಖಾತರಿ ನೀಡಿದೆ. ‘ನಾವಿಬ್ಬರೂ ಒಬ್ಬರ ತೋಳಿನಲ್ಲಿ ಇನ್ನೊಬ್ಬರು ಬಂಧಿಯಾಗಿ ಪ್ರೀತಿಯ ನಿಶೆಯಲ್ಲಿ ಮುತ್ತಿನ ಮತ್ತು ನೆತ್ತಿಗೇರಿಸಿಕೊಂಡು ಒಲವಿನಾಟದಲ್ಲಿ ಜಾರಿ ಬಿಡೋಣ.’ ಎಂದು ಪಿಸುಮಾತಿನಲ್ಲಿ ಹೇಳಿದೆ. ನನ್ನ ಕೈ ಬೆರಳುಗಳ ಸಂದಿಯಲ್ಲಿ ಖಾಲಿಯಿದ್ದ ಜಾಗವನ್ನು ನಿನ್ನ ಮೃದುವಾದ ಬೆರಳಿನಿಂದ ತುಂಬಿದೆ. ಹಿತವಾಗಿ ನನ್ನೆದೆಯ ವೀಣೆಯನು ಮೀಟುತ ಕೊರಳಿಗೆ ಮುತ್ತಿನ ಮಳೆಗರೆದೆ. ಕೆನ್ನೆಯನು ಚಿಕ್ಕದಾಗಿ ಕಚ್ಚಿದೆ. ನಿನ್ನ ತುಂಬಿದೆದೆಯ ಸದ್ದನು ನಾ ಕೇಳಲು ಕುತೂಹಲಿತನಾಗಿ ಮುಂದಾದಾಗ ಮರಿ ಜಿಂಕೆಯಂತೆ ಹೆದರಿ ಓಡಿ ಹೋಗಿ ತಿಂಗಳಾಯಿತು ಪತ್ತೆ ಇಲ್ಲ.
ಭಾವಕೋಶದಲ್ಲಿ ಹುದುಗಿದ ಭಾವ ತಂತುಗಳ ಮೀಟಿದೆ. ಮಧುರ ಅನುರಾಗ ಬಂಧನದಲ್ಲಿ ನನ್ನನ್ನು ತೇಲುವಂತೆ ಮಾಡಿದೆ. ಇದೀಗ ನಿನಗಾಗಿ ಹಂಬಲಿಸುವ ಕ್ಷಣಗಳು ನನ್ನವು. ಮೊಗ್ಗಿನಂತೆ ನಾಚುವ ನಿನಗೆ ಮಗ್ಗುಲಲ್ಲೇ ಮಲಗುವ ಮಡದಿ ಸ್ಥಾನ ನೀಡಲು ಕಾದಿರುವೆ. ಮಿಂಚಿನಂತೆ ಬಳಿ ಸುಳಿದು ಮರೆಯಾಗಿ ಹೋದ ಪ್ರೇಯಸಿ ನೀನು. ಒಂದೊಂದು ದಿನವನ್ನೂ ಎಣಿಸುತ್ತ ಕಳೆಯುತಿರುವೆ. ಪ್ರತಿಯೊಂದು ಕ್ಷಣದಲ್ಲಿ ನಿನ್ನದೇ ಆರಾಧನೆ ಗಾಢವಾಗುತ್ತಿದೆ. ಇನ್ನು ಜಾಸ್ತಿ ಸತಾಯಿಸದಿರು. ನನಗಾಗಿ ಮಿಡಿವ ನಿನ್ನ ಹೃದಯಕೆ ಕನಸಲ್ಲೂ ನೋಯಿಸಲಾರೆ. ನಿನಗಿಂತ ನೂರು ಪಟ್ಟು ಮಿಗಿಲಾಗಿ ಪ್ರೀತಿಸ್ತಿನಿ. ಅಂತ ನಿನಗೂ ಗೊತ್ತು. ನಮ್ಮೂರ ಸಂತೆಯ ಜನಜಂಗುಳಿಯಲ್ಲಿ ಕೈಯಲ್ಲಿ ಕೆಂಗುಲಾಬಿಗಳ ಗುಚ್ಛ ಹಿಡಿದು ಕಾಯ್ತಿರ್ತಿನಿ. ಸಂತೆಯ ಗದ್ದಲದಲ್ಲೂ ನಿನ್ನ ಹೆಜ್ಜೆಗಳ ಹಿಂಬಾಲಿಸುವಾಸೆ ಮಲ್ಲಿಗೆಯಂಥ ಜಡೆಯನ್ನು ಕತ್ತಿನ ಮುಂಭಾಗದಲ್ಲಿ ಇಳಿ ಬಿಟ್ಟುಕೊಂಡು ಬಂದು ಬಿಡು. ಬೆಡಗಿ.ಗಿಜಿಗಿಡುವ ಜನಸ್ತೋಮದ ಮಧ್ಯೆದಲ್ಲಿ ನಿನ್ನ ಬೆಳ್ಳನೆಯ ಬೆನ್ನಲಿ ಕಚಗುಳಿ ಇಡುವಾಸೆ.ಹೆಣ್ಣಿನ ಸ್ನೇಹವೆಂದರೇನು ತಿಳಿಯದವ ನಾನು ನಿನ್ನ ಒಲವಿನಾಟದಿಂದಲೇ ನವಿರಾದ ಪುಳಕ ಅನುಭವಿಸುತಿರುವೆ.
ನಿನಗೂ ಅಂಥ ಪುಳಕಗಳನು ನೀಡಲು ಎದುರು ನೋಡುತಿರುವೆ. ಕಾಳಜಿ ತೋರಿ ಪ್ರೀತಿಸಿದವಳು ನೀನು.ಮನದ ಗಾಯಕೆ ಮುದ್ದಿನ ಮದ್ದು ಸವರಿದವಳು ನೀನು. ನನ್ನ ನಂಬಿಕೆಯನು ಘಾಸಿಗೊಳಸದಿರು. ನಿನ್ನ ನೆನಪು ತುಂಬಿದ ಹಾಡು ” ಮಿಡಿವ ನಿನ್ನ ಹೃದಯದಲ್ಲಿ ಕೊಡಲೆ ನಾ ಹಾಜರಿ.” ಕೇಳುತ್ತ ನಿಂತಿರುವೆ. ನಿನ್ನ ಬರುವಿಗಾಗಿ ನಿನ್ನ ಒಲವಿಗಾಗಿ.
- ಇಂತಿ
ನಿನ್ನೊಲವಿನ ಕಿಟ್ಟಿ (ಕೃಷ್ಣ)